ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇತ್ರದಾನ ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಿದ ಶಿಕ್ಷಣ ಸಚಿವರು

ತಿಪಟೂರು: ದಾನಗಳಲ್ಲಿ ಶ್ರೇಷ್ಠದಾನ ಎನಿಸಿಕೊಂಡಿರುವ ನೇತ್ರದಾನ ಮಾಡಲು 'ಪ್ರತಿಜ್ಞಾ ಪತ್ರ'ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ನಾಗೇಶ್ ಅವರು ಸೋಮವಾರ ತಿಪಟೂರಿನಲ್ಲಿ ಸಹಿ ಹಾಕಿದರು.

ತಿಪಟೂರು ತಾಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ನಾಗೇಶ್ ಅವರು ನೇತ್ರದಾನ ಮಾಡುವ ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಿದರು.

'ಅನ್ನದಾನದಂತೆ ನೇತ್ರದಾನ ಕೂಡ ಶ್ರೇಷ್ಠ ದಾನವಾಗಿದೆ. ಮನುಷ್ಯ ತಾನು ಕಾಲವಾದ ನಂತರ ಮತ್ತೊಬ್ಬರ ಜೀವನದಲ್ಲಿ ಬೆಳಕು ಮೂಡಿಸುವ, ಜಗತ್ತನ್ನು ನೋಡಲು ಅವಕಾಶ ಕಲ್ಪಿಸುವ ಶ್ರೇಷ್ಠ ಕಾರ್ಯವೇ ನೇತ್ರದಾನ. ವಿವಿಧ ಕಾರಣಗಳಿಂದ ನಮ್ಮ ದೇಶದಲ್ಲಿ ಅಂಧತ್ವ ಎದುರಿಸುತ್ತಿರುವ ನಾಗರಿಕರ ಸಂಖ್ಯೆ ದೊಡ್ಡದಿದೆ. ಇಂತಹ ಅಂಧರ ಬಾಳಿನಲ್ಲಿ ಬೆಳಕು ಮೂಡಿಸುವ ಶ್ರೇಷ್ಠ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದಾಗಬೇಕು' ಎಂದು ನೇತ್ರದಾನಕ್ಕೆ ಸಚಿವ ನಾಗೇಶ್ ಅವರು ಕರೆ ನೀಡಿದರು.

'ಆರೋಗ್ಯ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತಹ ಸಾಧನೆಗಳನ್ನು ಭಾರತ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಕೋವಿಡ್-19 ಮಹಾಮಾರಿ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ವ್ಯಾಪಿಸುತ್ತಿದ್ದ ಸಂದರ್ಭದಲ್ಲಿ ಭಾರತ ಎದುರಿಸಬಹುದಾದ ಪರಿಸ್ಥಿತಿ ಕುರಿತು ಮುಂದುವರೆದ ರಾಷ್ಟ್ರಗಳು ಭಯ, ಭೀತಿ, ಆತಂಕ ವ್ಯಕ್ತಪಡಿಸಿದ್ದವು. ಭಾರತವು ಕೋವಿಡ್-19 ಔಷಧಿ ಮತ್ತು ಲಸಿಕೆಗಾಗಿ ಅನ್ಯ ರಾಷ್ಟ್ರಗಳ ಮೇಲೆ ಅವಲಂಬಿಸಬೇಕಾಗುತ್ತದೆ.

130 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತಕ್ಕೆ ಲಸಿಕೆ ಮತ್ತು ಔಷಧಿ ಸಿಗುವುದು ವಿಳಂಬವಾಗುವ ಕಾರಣ ಭಾರತದಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತದೆ ಎಂದು ವಿವಿಧ ರಾಷ್ಟ್ರಗಳ ತಜ್ಞರು ಹೇಳಿಕೆ ನೀಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್-19 ನಿಯಂತ್ರಣದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಬೇರೆ ದೇಶಗಳ ಮೇಲೆ ಅವಲಂಬನೆಯಾಗದೆ ಭಾರತದಲ್ಲೇ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಜನರಿಗೆ ಉಚಿತವಾಗಿ ನೀಡುವ ಮೂಲಕ ಇಡೀ ಜಗತ್ತೇ ಭಾರತದ ಕಡೆ ನೋಡುವ ಸಾಧನೆಗೆ ಕಾರಣವಾಯಿತು. ಅಷ್ಟೇ ಅಲ್ಲದೆ ಹಲವು ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ಸರಬರಾಜು ಮಾಡಿ ಭಾರತ ಸೈ ಎನಿಸಿಕೊಂಡಿತು' ಎಂದು ಸಚಿವ ನಾಗೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

25/04/2022 05:17 pm

Cinque Terre

2.96 K

Cinque Terre

0

ಸಂಬಂಧಿತ ಸುದ್ದಿ