ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರವಾಗುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆಯನ್ನು ಆಮ್ ಆದ್ಮಿ ಪಾರ್ಟಿ ಬೆಂಬಲಿಸಿದೆ. ಇದೇ ವೇಳೆ, ಸಚಿವ ಡಾ.ಸುಧಾಕರ್ ಅವರಿಂದ ರಾಜೀನಾಮೆ ಪಡೆದು ಹಗರಣಗಳ ಕುರಿತು ಸಮಗ್ರ ನ್ಯಾಯಾಂಗ ತನಿಖೆ ಮಾಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, 2020 ರ ಸೆಪ್ಟೆಂಬರ್ 23ರಂದು ನೀಡಲಾದ KDL/EQPT/ TND/LE-3 ಭಾಗ HAE/103/2020-21 (IND-720) ಹಾಗೂ KDL/EQPT/ Re-TND/LE-5 ಭಾಗ HA/104/2020-21 (IND-721) ಸಂಖ್ಯೆಯ ಟೆಂಡರ್‌ನಲ್ಲಿ ಅಕ್ರಮವಾಗಿದೆ. ಈ ಬಗ್ಗೆ ಈ ಕಳೆದ ವರ್ಷವೇ ನಾವು ದಾಖಲೆ ಬಿಡುಗಡೆ ಮಾಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಒಂದು ಅಲ್ಪಾವಧಿ ಗುತ್ತಿಗೆಯನ್ನು ರದ್ದು ಮಾಡಿ ರೀಟೆಂಡರ್ ಮಾಡುವಾಗ ಟೆಂಡರ್ ಸ್ಪೆಸಿಫಿಕೇಶನ್ ಬದಲಿಸಲು ಅವಕಾಶವಿಲ್ಲ. ಆದರೂ ಬದಲಾವಣೆ ಮಾಡಿದ್ದಾರೆ. ಟೆಂಡರ್‌ನಲ್ಲಿ ಕೇವಲ ಒಂದೇ ಬಿಡ್ ಬಂದಿದ್ದರೂ ಅದನ್ನು ಆಯ್ಕೆ ಸಮಿತಿ ಹೇಗೆ ಪರಿಗಣಿಸಿದೆ?. ಸಿಸ್ಮೆಕ್ಸ್ ಎಂಬ ಕಂಪನಿಯಿಂದ ತ್ರೀ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್ ಉಪಕರಣವನ್ನು ದೆಹಲಿ ಸರ್ಕಾರವು 1,80,540 ರೂ, ಹಿಮಾಚಲ ಪ್ರದೇಶ ಸರ್ಕಾರವು 1,30,000 ರೂ ಮತ್ತು ದೆಹಲಿಯ ಮುನಿಸಿಪಾಲಿಟಿ 1,44,000 ರೂ. ಖರೀದಿಸಿದೆ.
ಆದರೆ, ನಮ್ಮ ಕರ್ನಾಟಕ ಸರ್ಕಾರವು ಅದೇ ಉಪಕರಣಕ್ಕೆ 2,96,180 ರೂ ನೀಡಿ ಖರೀದಿಸಿದೆ. ಒಟ್ಟು 1195 ಉಪಕರಣ ಖರೀದಿಸಲು 19.85 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗಿದೆ. ಅದೇ ರೀತಿ ಫೈವ್ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್ಗಳನ್ನು ಸಿಸ್ಮೆಕ್ಸ್ ಕಂಪನಿಯು ಕೇರಳ ಸರ್ಕಾರಕ್ಕೆ 4.60 ಲಕ್ಷ ರೂ. ನೀಡಿದೆ. ಆದರೆ, ಕರ್ನಾಟಕ ಸರ್ಕಾರವು ಅದೇ ಕಂಪನಿಯಿಂದ 8.35 ಲಕ್ಷ ರೂಪಾಯಿಯಂತೆ ಖರೀದಿಸಿದೆ. ಒಟ್ಟು 165 ಈ ಉಪಕರಣಗಳ ಖರೀದಿಯಿಂದಾಗಿ 6.18 ಕೋಟಿ ರೂ ಹೆಚ್ಚುವರಿ ಹೊರೆಯಾಗಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.
PublicNext
14/04/2022 07:10 pm