ಕೆ.ಆರ್.ಪುರ: ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣವರ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಬೆಂಗಳೂರು ಪೂರ್ವ ತಾಲೂಕು ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ ದೂರಿದೆ. ಕೆ.ಆರ್. ಪುರದಲ್ಲಿ ವಾಲ್ಮೀಕಿ ಸಮುದಾಯದ ಗುರುಗಳು ಹಾಗೂ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸುಳ್ಳು ಆರೋಪಗಳಿಂದ ದಕ್ಷ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಅವರ ಘನತೆಗೆ ಧಕ್ಕೆ ತರುವಂಥ ಕುತಂತ್ರ ನಡೆಯುತ್ತಿದೆ. ಸ್ವಂತ ಶಕ್ತಿ ಸಾಮರ್ಥ್ಯ, ಅಗಾಧ ಜ್ಞಾನದಿಂದ ಮೇಲೆ ಬಂದವರು ಐಪಿಎಸ್ ಅಧಿಕಾರಿ ರವಿ. ಸಾಮಾಜಿಕವಾಗಿ, ಧಾರ್ಮಿಕವಾಗಿ ಹಿಂದುಳಿದ ವರ್ಗಗಳನ್ನು ಕೊನೆಗಾಣಿಸುವುದು ಈ ಕುತಂತ್ರಿಗಳ ಒಳಸಂಚಾಗಿದೆ. ವಕೀಲ ಜಗದೀಶ್ ನಂತವರು ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ತೋಳಿನಲ್ಲಿ ಬಲ ಇದ್ದವರು ತಮ್ಮ ವಿರುದ್ಧ ದೂರು ನೀಡಿ ಎಂದು ಬಹಿರಂಗ ಸವಾಲ್ ಹಾಕುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ವಕೀಲ ಜಗದೀಶ್ ನಂತಹ ಸಮಾಜಘಾತುಕ ವ್ಯಕ್ತಿಗಳು ನಮ್ಮೊಳಗೆ ಇದ್ದರೆ ನಾಗರಿಕ ಸಮಾಜ ತಲೆತಗ್ಗಿಸುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಈತನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮುದಾಯ ಗುರುಗಳಾದ ಈಶ್ವರಾನಂದ ಸ್ವಾಮೀಜಿ, ಮುಖಂಡ ಬಾಕ್ಸರ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
PublicNext
24/01/2022 10:08 pm