ಯಲಹಂಕ: ದೇಶದ ಸ್ವಾತಂತ್ರ್ಯಕ್ಕಾಗಿ ಇತರರ ರಕ್ತ ಹರಿಯುತ್ತಿದ್ದರೆ ನೇತಾಜಿಯವರ ದೇಹದಲ್ಲಿ ರಕ್ತವೇ ಚಿಮ್ಮುತ್ತಿತ್ತು. ಅಂತಹ ಹೋರಾಟಗಾರ ಈ ಯುಗ ಪುರುಷ. ಇತರ ಯಾವುದೇ ಸ್ವಾತಂತ್ರ್ಯ ಹೋರಾಟಗಾರರನ್ನು ನೇತಾಜಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯನ್ನು ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿರುವ ಯಲಹಂಕದ ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಯಲ್ಲಿ ಜರುಗಿತು. ನೇತಾಜಿ ಮತ್ತು ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ನೆನಪಿಗಾಗಿ ಹೊಸ 75 ನೇತಾಜಿ ಅಮೃತ NCC ಶಾಲೆಗಳ ಘೋಷಣೆ ಮಾಡಲಾಯಿತು ಹಾಗೂ ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಪುನಾರಂಭಕ್ಕೆ ಚಾಲನೆ ನೀಡಲಾಯಿತು.
ಹೆಲಿಪ್ಯಾಡ್, ಲಾಂಚ್ ಸಹಿತ 10 ಕೋಟಿ ವೆಚ್ಚದ ಮೂಲಸೌಕರ್ಯ ಕಾಮಗಾರಿಗಳ ಶಂಕುಸ್ಥಾಪನೆ ನಡೆಯಿತು ಮತ್ತು 75 ಪೈಲೆಟ್ ಗಳ ತರಬೇತಿಗೆ ಚಾಲನೆ ನೀಡಿದ ಸಿಎಂ, ರಿಮೋಟ್ ಮೂಲಕ ಹೊಸ ಟೆಕ್ನಾಮ್ ವಿಮಾನ ಲೋಕಾರ್ಪಣೆ ಮಾಡಿದರು. ಹೆಲಿಟ್ಯೂರಿಸಂಗೆ ಚಾಲನೆ ನೀಡಿ ಟಿಕೆಟ್ ಚೆಕ್ಕನ್ನು ದಂಪತಿಗೆ ಹಸ್ತಾಂತರಿಸಿದರು ಹಾಗೂ BFTS ಲೋಗೊ ಅನಾವರಣಗೊಳಿಸಲಾಯಿತು. ಯುವಜನತೆ ಮತ್ತು ಸಬಲೀಕರಣಕ್ಕಾಗಿ ಸಿದ್ದಿ ಕ್ರೀಡಾಪಟುಗಳ ತರಬೇತಿಗೆ ಚಾಲನೆ ನೀಡಿ ಇಬ್ಬರು ಕ್ರೀಡಾಪಟುಗಳ ಸಬಲೀಕರಣಕ್ಕೆ ಕ್ರೀಡಾ ಕಿಟ್ ವಿತರಿಸಲಾಯಿತು. ಮಹಿಳಾ ಸ್ವಶಕ್ತಿಗಾಗಿ ಸ್ವರಕ್ಷಣೆ ತರಬೇತಿಗೆ ಸಿಎಂ ಚಾಲನೆ ನೀಡಿದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಯುವಜನ ಕ್ರೀಡಾ ಸಚಿವ ನಾರಾಯಣ ಗೌಡ, ಗಣ್ಯರನ್ನು ಗೌರವಿಸಿದರು. ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಥ್ ನಾರಾಯಣಗೌಡ, ಪ್ರಾಥಮಿಕ- ಪ್ರೌಢಶಿಕ್ಷಣ ಸಚಿವ ನಾಗೇಶ್, ಕೇಂದ್ರ ITBT ಸಚಿವ ರಾಜೀವ್ ಚಂದ್ರಶೇಖರ್, ಸ್ಥಳೀಯ ಬ್ಯಾಟರಾಯನಪುರ ಶಾಸಕ ಕೃಷ್ಣಭೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.
PublicNext
23/01/2022 10:02 pm