ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ನಾರಾಯಣ ಸ್ವಾಮಿ ಕೇವಲ 54 ಮತ ಗಳಿಸುವ ಮೂಲಕ ಹೀನಾಯ ಸೋಲು ಅನುಭವಿಸಿದ್ದರು. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾದವರು ಕೇವಲ 54 ಮತ ಗಳಿಸಿರುವುದು ಜಿಲ್ಲಾ ಬಿಜೆಪಿ ಮುಖಂಡರ ಭಿನ್ನಮತ ಬಯಲು ಮಾಡಿದೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ 2262 ಮತ ಪಡೆದು ಜಯ ಸಾಧಿಸಿದ್ದಾರೆ. ಜೆಡಿಎಸ್ ನ ರಮೇಶ್ ಗೌಡ 1540 ಮತ ಪಡೆದಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಕೇವಲ 54 ಮತ ಗಳಿಸಿದ್ದರು.
ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣ ಸ್ವಾಮಿ ʼನನಗೆ ಕೇವಲ 54 ಮತ ಬಂದಿರುವುದು ಇದು ನನ್ನ ಸೋಲಲ್ಲ, ಪಕ್ಷದ ಸೋಲು ಎಂದರು ಹಾಗೂ ತಾಲೂಕು ಅಧ್ಯಕ್ಷ ನಾಗರಾಜು, ನಗರ ಅಧ್ಯಕ್ಷ ಶಿವಶಂಕರ್, ಜಿಲ್ಲಾ ಉಪಾಧ್ಯಕ್ಷ ಅಶ್ವತ್ಥ ನಾರಾಯಣ್ ಮತ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಪಕ್ಷದಲ್ಲಿ ಇಂತಹ ಮುಖಂಡರು ಇದ್ದರೆ ಪಕ್ಷಕ್ಕೆ ಕೆಡುಕು. ಇವರೆಲ್ಲ ರಾಜೀನಾಮೆ ಕೊಟ್ಟು ಹೋಗಲಿ. ನಿಷ್ಠಾವಂತ ಕಾರ್ಯಕರ್ತರಿಂದ ಪಕ್ಷ ಕಟ್ಟುವುದಾಗಿ ಹೇಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬಿ.ಸಿ.ನಾರಾಯಣ ಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡರು, ಕಾಂಗ್ರೆಸ್ -ಜೆಡಿಎಸ್ ನ ಹಣ ಬಲದಿಂದಾಗಿ ನಮ್ಮ ಪಕ್ಷಕ್ಕೆ ಕಡಿಮೆ ಮತ ಬಂದಿದೆ. ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕಾದ ವಿಷಯವನ್ನು ಪತ್ರಿಕಾಗೋಷ್ಠಿ ನಡೆಸಿದ್ದು ಪಕ್ಷದ ಹಿನ್ನಡೆಗೆ ಕಾರಣವಾಗಲಿದೆ ಎಂದರು. ನಾರಾಯಣಸ್ವಾಮಿ ಹೇಳಿಕೆ ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದ ಸಾಸಲು ಹೋಬಳಿ ಬಿಜೆಪಿ ಘಟಕ ಅಧ್ಯಕ್ಷ ರುದ್ರೇಗೌಡ ಇಂತಹ ಹೇಳಿಕೆ ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದರು.
Kshetra Samachara
17/12/2021 12:22 pm