ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಕರ್ನಾಟಕ ಅಸಂಘಟಿತ ಕಾರ್ಮಿಕರ ಸಂಘದ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು.
ಕೆ.ಆರ್. ಪುರದ ಟಿ.ಸಿ. ಪಾಳ್ಯದ ಕಚೇರಿ ಎದುರು ಪ್ರತಿಭಟನೆ ನಡೆಸಿ ಐದು ಹಕ್ಕೊತ್ತಾಯ ಮಂಡಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಕಚೇರಿ ಅಧೀಕ್ಷಕರಾದ ಶೋಭಾ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಸಂಘಟನೆ ರಾಜ್ಯಾಧ್ಯಕ್ಷ ಅರುಣ್ ಕೆ. ಮಾತನಾಡಿ, ಪೂರ್ವ ತಾಲೂಕಿನ ಎಲ್ಲ ಹಾಸ್ಟೆಲ್ ಗಳ ನಿರ್ವಹಣೆಗೆ ಅಧಿಕಾರಿಯ ಕಾಲಾವಧಿಯಲ್ಲಿ ಸರ್ಕಾರದಿಂದ ಬಂದಿರುವ ಅನುದಾನ ಬಳಕೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆ ಹಾಗೂ 3-4 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾಯಿಸಿ ಅಭಿವೃದ್ಧಿಗೆ ಮುಂದಾಗಬೇಕೆಂಬುದು ಸೇರಿದಂತೆ ಐದು ಹಕ್ಕೊತ್ತಾಯ ಮಂಡಿಸಿದರು.
ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಕಾಲಾವಧಿಯಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನೆ ಮಾಡಿದ್ದಕ್ಕಾಗಿ ತಮ್ಮ ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು, ಆದಷ್ಟೂ ಬೇಗ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುವುದಾಗಿ ತಿಳಿಸಿದರು.
ಇಲ್ಲಿ ನಡೆಯುವಂತಹ ಅಭಿವೃದ್ಧಿ ಕಾರ್ಯ, ಸೌಲಭ್ಯ ಕುರಿತು ಅರ್ಜಿ ಸಲ್ಲಿಸಿ ತಿಂಗಳುಗಟ್ಟಳೆ ಕಳೆದರೂ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನು ಹಾಗೂ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸುವುದಾಗಿ ತಿಳಿಸಿದರು.
Kshetra Samachara
30/11/2021 09:12 pm