ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಹುತೇಕ ಬೆಂಗಳೂರು ಅದರಲ್ಲೂ ವಿಶೇಷವಾಗಿ ಉತ್ತರ ಮತ್ತು ಪೂರ್ವ ಬೆಂಗಳೂರು ಮಳೆಯಿಂದಾಗಿ ಹಲವಾರು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನವನ್ನು ಮೂರಾಬಟ್ಟೆ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಿಬಿಎಂಪಿಯ ಇಂಜಿನಿಯರ್‌ಗಳೊಂದಿಗೆ ಮಹತ್ತರವಾದ ಸಭೆ ಸಡೆಸಿ ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವಹಿಸಲು ನಿರ್ದೇಶಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಬಿಬಿಎಂಪಿಯಲ್ಲಿ ಮಹತ್ತರವಾದ ಸಭೆ ನಡೆಸಿ ಪಾಲಿಕೆ ವ್ಯಾಪ್ತಿಯಲ್ಲ್ಲಿರುವ ರಾಜಕಾಲುವೆಗಳನ್ನು ವಿಸ್ತರಿಸಲು ಸೂಚಿಸಿದರಲ್ಲದೆ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದರು.
ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೃಹತ್ ನೀರುಗಾಲುವೆಗಳ ಪುನರ್‌ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಲು ಸೂಚಿಸಿದರು.
ಚರಂಡಿ ನೀರು ರಾಜಕಾಲುವೆ ಸೇರಲು ಒತ್ತುವರಿಯಿಂದ ಜಾಗದ ಅಭಾವವಿದೆ. ಬೆಂಗಳೂರಿನಲ್ಲಿ ಏಕಾಏಕಿ ಒತ್ತುವರಿ ತೆರವುಗೊಳಿಸಲು ಸಾಧ್ಯವಿಲ್ಲ ಆದ್ದರಿಂದ ಹಂತಹಂತವಾಗಿ ತೆರವುಗೊಳಿಸಲು ಸೂಚಿಸಿದರು.
ಬಡವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಒತ್ತುವರಿ ತೆರವುಗೊಳಿಸಬೇಕಾಗುವುದು, ಎಂದು ತಿಳಿಸಿದರು. ಹೆಬ್ಬಾಳ ವ್ಯಾಲಿ ನೀರು ಸರಾಗವಾಗಿ ಹರಿದುಹೋಗಲು ರೈಲ್ವೆ ವೆಂಟ್ ಅಗಲೀಕರಿಸಲು ಸೂಚಿಸಿದರು.
ಪಾಲಿಕೆಯ ಅಧಿಕಾರಿಗಳು ಯಾವಾಗಲು ಸಜ್ಜಾಗಿರುವಂತೆಯೂ ಸೂಚಿಸಿದರು. ಈಗಾಗಲೆ, ನಗರದಾದ್ಯಂತ ತೆಗೆದುಕೊಂಡಿರುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಎಲ್ಲೆಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲವೋ ಅಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಚರಂಡಿಗಳಲ್ಲಿ ನೀರು ಹೊರ ಹರಿಯುವುದಕ್ಕೆ ಮುಖ್ಯ ಕಾರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿ ಸರ್ಕಾರದಿಂದ ಸಂಪೂರ್ಣ ನೀಡುವುದಾಗಿ ಸ್ಪಷ್ಟಪಡಿಸಿದರು.
ಹೊಸದಾಗಿ ಎಲ್ಲೆಲ್ಲಿ ಕಾಲುವೆಗಳನ್ನು ನಿರ್ಮಿಸಲು ಅಗತ್ಯವಿದೆಯೋ ಅಲ್ಲಲ್ಲಿ ಇದಕ್ಕೆ ಸೂಕ್ತ ಸಲಹೆ-ಕ್ರಮಗಳನ್ನು ಸೂಚಿಸಿದರು.
ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಇಂದಿನ ಸಭೆಯಲ್ಲಿ ಸಚಿವರು ಸೇರಿದಂತೆ ನಗರದ ಬಹುತೇಕ ಶಾಸಕರು ಭಾಗಿಯಾಗಿದ್ದರು.
ಸಭೆಗೂ ಮುನ್ನ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಪ್ರದೇಶಗಳಿಗೆ ಬೊಮ್ಮಾಯಿ ಅವರು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಜೊತೆ ಹೆಣ್ಣೂರು ಮುಖ್ಯ ರಸ್ತೆಯ ಪಟೇಲ್ ಮುನಿಶಾಮಪ್ಪ ಬಡಾವಣೆಯಲ್ಲಿ ಮಳೆಯಿಂದ ಉಂಟಾದ ಸಮಸ್ಯೆ ಹಾಗು ತೊಂದರೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
Kshetra Samachara
24/11/2021 05:41 pm