ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದದ ಕೇಂದ್ರವಾಗಿದೆ. ಈದ್ಗಾ ಮೈದಾನ ,ಆಟದ ಮೈದಾನ, ಅಂತೆಲ್ಲಾ ಕರೆಯುವ ಮೈದಾನ ಬಿಬಿಎಂಪಿಯದ್ದೋ, ವಕ್ಫ್ ಮಂಡಳಿಯದ್ದೋ ಎಂಬ ವಿವಾದ ಎದ್ದಿದೆ. ಇದೀಗ ಈದ್ಗಾ ಮೈದಾನಕ್ಕೆ ಶಾಸಕ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ.
ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೈದಾನದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲು ಹಿಂದೂ ಸಂಘಟನೆಗಳು ಮನವಿಯನ್ನು ಸಲ್ಲಿಸಿದ್ವು. ಬಿಬಿಎಂಪಿ ಹಿಂದೂ ಸಂಘಟನೆಗಳ ಯೋಗ ದಿನಾಚರಣೆಯ ಮನವಿಯನ್ನು ತಿರಸ್ಕರಿಸಿತ್ತು. ವಕ್ಫ್ ಮಂಡಳಿ ಮೈದಾನ ತನಗೆ ಸೇರಿದ್ದು ಎಂದು ದಾಖಲೆಗಳನ್ನು ನೀಡಿದೆ. ದಾಖಲೆಯನ್ನು ಪರಿಶೀಲನೆ ನಡೆಸಲು ಕೆಲವು ದಿನ ಸಮಯಾವಕಾಶ ಬೇಕಿರುವುದರಿಂದ ಬಿಬಿಎಂಪಿ ಹಿಂದೂ ಸಂಘಟನೆಯ ಮನವಿಯನ್ನು ತಿರಸ್ಕರಿಸಿತ್ತು.
ಮೈದಾನದ ವಿವಾದ ಹೆಚ್ಚಾದ ನಂತರ ಪೊಲೀಸರು ನಿರಂತರವಾಗಿ ಈದ್ಗಾ ಮೈದಾನದಲ್ಲಿ ಕಾವಲನ್ನು ಕಾಯುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆಂದು ಈಗಾಗಲೇ ಮೈದಾನದ ಸುತ್ತಲೂ ಸಿಸಿಟಿವಿಯನ್ನು ಸಹ ಅಳವಡಿಸಲಾಗಿದೆ. ಚಾಮರಾಜಪೇಟೆಯ ಶಾಸಕರಾಗಿರುವ ಜಮೀರ್ ಅಹಮದ್ ಖಾನ್ ಈದ್ಗಾ ಮೈದಾನಕ್ಕೆ ತೆರಳಿ ವಾಸ್ತವ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದ್ದಾರೆ.
ಇದೀಗ ಬಿಬಿಎಂಪಿ ಅನುಮತಿಯನ್ನು ನಿರಾಕರಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹಿಂದೂ ಸಂಘಟನೆಗಳು ತಿಳಿಸಿವೆ. ಸ್ವಾತಂತ್ರ್ಯ ದಿನಾಚರಣೆ , ಗಣೇಶ ಹಬ್ಬ ಸೇರಿದಂತೆ ವಿವಿಧ ಸಾರ್ವಜನಿಕ ಹಬ್ಬಗಳನ್ನು ಆಚರಿಸಲು ಹಿಂದೂ ಸಂಘಟನೆ ಮುಂದಾಗಿದೆ. ಆದರೆ ಬಿಬಿಎಂಪಿ ಮತ್ತು ನ್ಯಾಯಾಲಯದ ಅನುಮತಿಯನ್ನು ಪಡೆದು ಕಾರ್ಯಕ್ರಮವನ್ನು ನಡೆಸಬೇಕಿದೆ.
Kshetra Samachara
21/06/2022 09:04 pm