ಬೆಂಗಳೂರು: ಇದು ಆಡಳಿತ ಪಕ್ಷ ಬಿಜೆಪಿ ಕೇಂದ್ರ ಕಚೇರಿಗೆ ಹೊಂದಿಕೊಂಡಿರುವ ಬಿಬಿಎಂಪಿ ವಾರ್ಡ್. ಪಾರ್ಟಿ ಆಫೀಸ್ ಜೋರಾಗಿದ್ದು, ವಾರ್ಡ್ ಸಮಸ್ಯೆಗಳಿಗೆ ಮಾತ್ರ ಮುಕ್ತಿಯಿಲ್ಲ! ಜನರಿಗೆ ಮೂಲಸೌಕರ್ಯವೇ ಕೈಗೆಟಕುತ್ತಿಲ್ಲ. ಈ ವಾರ್ಡ್ ಅವಲೋಕನವೀಗ ನಿಮ್ಮ ಮುಂದೆ...
ಅಂದಹಾಗೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ 64ನೇ ವಾರ್ಡ್ ರಾಜಮಹಲ್ ಗುಟ್ಟಹಳ್ಳಿ. ಹಿರಿಯ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹಾಗೂ ಪಾಲಿಕೆಯ ಬಿಜೆಪಿ ಮಾಜಿ ಸದಸ್ಯೆ ಹೇಮಲತಾ ಶೇಟ್ ಇಲ್ಲಿನ ಜನಪ್ರತಿನಿಧಿಗಳು. ವಿಪರ್ಯಾಸವೆಂದರೆ ಹೈಟೆಕ್ ಬಿಜೆಪಿ ಕಚೇರಿಗೇ ಹೊಂದಿಕೊಂಡಿರುವ ವಾರ್ಡ್ ನಲ್ಲಿ ಜನರಿಗೆ ಸಾಕಷ್ಟು ಪ್ರಾಬ್ಲಂ ಇದೆ.
ಹೌದು. ವೈಯಾಲಿಕಾವಲ್, ಸ್ವಿಮ್ಮಿಂಗ್ ಪೂಲ್ ಬಡಾವಣೆ, ರಾಜಮಹಲ್ ಗುಟ್ಟಹಳ್ಳಿ ಏರಿಯಾದಲ್ಲಿ ಒಳಚರಂಡಿ ದುರಸ್ತಿ, ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗೆ ಕಳೆದ ವರ್ಷವೇ ರಸ್ತೆ ಅಗೆಯಲಾಗಿದೆ. ಈಗಲೂ ಕಾಮಗಾರಿ ಅಪೂರ್ಣವಾಗಿದ್ದು, ರಸ್ತೆ ಬದಿ ನಿವಾಸಿಗರಿಗೆ, ಪುಟ್ಟ ಅಂಗಡಿದಾರರಿಗೆ ತೊಂದರೆ ಆಗುತ್ತಿದೆ.
33 ಸಾವಿರ ಜನಸಂಖ್ಯೆಯ ಈ ಹಳೆ ವಾರ್ಡ್ ನಲ್ಲಿ ಪಾರ್ಕ್ ನಿರ್ವಹಣೆ ಕೊರತೆ ಎದ್ದು ಕಾಣುತ್ತೆ. ಕಾಮಗಾರಿಗೆ ರಸ್ತೆಗಳನ್ನ ಅಗೆದಿರೋದು ಜನಾಕ್ರೋಶಕ್ಕೂ ಕಾರಣವಾಗಿದೆ. ದೌರ್ಭಾಗ್ಯ ಎಂದರೆ ಸಚಿವ ಅಶ್ವತ್ಥ ನಾರಾಯಣ ಇತ್ತ ತಲೆ ಹಾಕದಿರೋದು ವಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು, ಇಂಡೋರ್ ಸ್ಟೇಡಿಯಂ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಸರ್ಕಾರಿ ಶಾಲೆ, ಆಸ್ಪತ್ರೆ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯ ವಾರ್ಡ್ ನಲ್ಲಿ ಆಗಿವೆ.
ಶಾಸಕರ ಅನುದಾನದಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಆದರೆ, ಸದ್ಯ ಪಾಲಿಕೆ ಸದಸ್ಯರಿಲ್ಲದ್ದರಿಂದ ಅಧಿಕಾರಿಗಳು ಜನರ ಸಮಸ್ಯೆ ಆಲಿಸಲು ಬರ್ತಿಲ್ಲ. ಇತ್ತ ಅಧಿಕಾರ ಇಲ್ಲದೆ ಮಾಜಿ ಕಾರ್ಪೊರೇಟರ್ ಅಸಹಾಯಕರು. ಎಟ್ ಲಿಸ್ಟ್ ಸಚಿವ ಅಶ್ವತ್ಥ ನಾರಾಯಣ್ ಕ್ಷೇತ್ರದಲ್ಲಿ ಕಾಣಿಸಿಕೊಂಡ್ರೆ ಸಾಕಿತ್ತು ಎಂಬ ಅಭಿಪ್ರಾಯ ಕೇಳಿ ಬರ್ತಿದೆ.
PublicNext
16/04/2022 04:55 pm