ದೊಡ್ಡಬಳ್ಳಾಪುರ: ದೇವನಹಳ್ಳಿಯನ್ನ ಜಿಲ್ಲಾ ಕೇಂದ್ರವಾಗಿ ಮಾಡುವ ಸಚಿವ ಹೇಳಿಕೆ, ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವದೊಳಗೆ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂಬ ಗಡುವು ನೀಡಿ ಪ್ರತಿಭಟನೆ ನಡೆಸಿದ ಸಂಘ ಸಂಸ್ಥೆಗಳು ಪಂಜಿನ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ದೇವನಹಳ್ಳಿಯನ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಸಚಿವರ ಹೇಳಿಕೆ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ನಗರದ ಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಿದ ಸಂಘ ಸಂಸ್ಥೆಗಳು ದೊಡ್ಡಬಳ್ಳಾಪುರ ನಗರವನ್ನ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಎಲ್ಲಾ ಅರ್ಹತೆಗಳನ್ನ ದೊಡ್ಡಬಳ್ಳಾಪುರ ನಗರಕ್ಕೆ ಇದೆ, ಅರ್ಹತೆ ಪರಿಗಣಿಸಿ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಿ, ನಾವೇನು ಭಿಕ್ಷೆ ಕೇಳುತ್ತಿಲ್ಲ. ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರ್ಕಾರ ಜನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿದೆ. ಜನೋತ್ಸವದೊಳಗೆ ದೊಡ್ಡಬಳ್ಳಾಪುರ ನಗರವನ್ನ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ರಸ್ತೆ ತಡೆ, ದೊಡ್ಡಬಳ್ಳಾಪುರ ಬಂದ್ ಮಾಡೋದಾಗಿ ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
PublicNext
29/08/2022 09:47 pm