ಬೆಂಗಳೂರು: ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾಗಿದ್ದ ಚಿಕ್ಕಪೇಟೆಯ ಸರ್ಕಾರಿ ಪ್ರೌಢಶಾಲೆಯ ಕಟ್ಟಡವನ್ನು ಜಾಗದ ಸಮೇತ ಮಾರಾಟ ಮಾಡಲು ಕಂದಾಯ ಇಲಾಖೆ ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಇಲಾಖೆಯ ತಕರಾರನ್ನೂ ಲೆಕ್ಕಿಸದೇ ಬಹುಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಅಥವಾ ಹರಾಜು ಹಾಕಲು ನಿರ್ದೇಶನ ನೀಡುವಂತೆ ಕೋರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ. ನಗರದ ಬಹುಕೋಟಿ ಬೆಲೆ ಬಾಳುವ ಪ್ರದೇಶದಲ್ಲಿರುವ ಈ ಆಸ್ತಿಯು, ಶಾಲೆಗಾಗಿಯೇ ದಾನಿಗಳು ನೀಡಿದ ಜಾಗವಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಪ್ರತ್ಯೇಕವಾಗಿ ಶಾಲೆ ಇರುವ ಜಾಗ ಮತ್ತು ಕಟ್ಟಡದ ಮಾರುಕಟ್ಟೆ ಮೌಲ್ಯವನ್ನು ನಿಗದಿ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸರ್ಕಾರಿ ಶಾಲೆಯ ಭವಿಷ್ಯವೂ ನಿಂತಿದೆ.
ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ 77 ವರ್ಷಗಳಷ್ಟು ಹಳೆಯದು. 13,735 ಚದರಡಿ ವಿಸ್ತೀರ್ಣದ ಮೈದಾನದಲ್ಲಿ 1945ರಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಾಲೆ ಆರಂಭವಾಗಿದ್ದವು. ಸ್ವಾತಂತ್ರ್ಯಾ ನಂತರ ಅದೇ ಜಾಗದಲ್ಲಿ ಪ್ರೌಢಶಾಲೆಯನ್ನೂ ತೆರೆಯಲಾಗಿತ್ತು. ಸದ್ಯ ಇಲ್ಲಿನ ಪ್ರತಿ ಚದರಡಿಗೆ ₹40 ಸಾವಿರದಷ್ಟು ಮಾರುಕಟ್ಟೆ ಮೌಲ್ಯ ಇದೆ. ಇನ್ನು, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಸ್ಥಳೀಯ ನಾಯಕರು ಪ್ಯಾಚ್ ಅಪ್ ಕಾರ್ಯ ಮಾಡಿದರು.
PublicNext
18/08/2022 04:04 pm