ದೊಡ್ಡಬಳ್ಳಾಪುರ: ಮನೆ ಯಜಮಾನ ಅಂಗವೈಕಲ್ಯಕ್ಕೆ ತುತ್ತಾಗಿ ಮೂಲೆ ಸೇರಿದ. ತಾಯಿ ಮಾನಸಿಕ ಖಿನ್ನತೆಯಿಂದ ದುಡಿಯುವ ಸ್ಥಿತಿಯಲಿಲ್ಲ. ಹಿರಿ ಮಗ ಮನೆ ಬಿಟ್ಟು ಬೆಂಗಳೂರು ಪಾಲಾದ. ಮನೆಯ ದೀನ ಸ್ಥಿತಿ ನೋಡಿ ಸುಮ್ಮನಿರಲಾರದ ಮನೆಮಗಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿ ಕುಟುಂಬವನ್ನು ಸಾಕುವುದರ ಜೊತೆಗೆ ತಮ್ಮನ ಶಾಲಾ ಕಲಿಕೆಗೆ ಆಸರೆಯಾಗಿದ್ದಳು!
ಬಡಕುಟುಂಬದ ಕರುಣಾಜನಕ ಸ್ಥಿತಿಯನ್ನು ʼಪಬ್ಲಿಕ್ ನೆಕ್ಸ್ಟ್ʼ ಸವಿವರವಾಗಿ ಜನರ ಮುಂದಿಟ್ಟಿತ್ತು. ಈ ವರದಿಗೆ ಮಿಡಿದ ಹೃದಯಗಳು ಈಗ ಕುಟುಂಬಕ್ಕೆ ಸಹಾಯಹಸ್ತ ಚಾಚಿವೆ.
ದೊಡ್ಡಬಳ್ಳಾಪುರ ತಾಲೂಕಿನ ಮಡೇಶ್ವರ ಗ್ರಾಮದಲ್ಲಿ ಮುರುಕಲು ಗುಡಿಸಲ ವಾಸಿ ನರಸಿಂಹಯ್ಯನವರ ಕುಟುಂಬ ಕಷ್ಟಗಳ ಸರಮಾಲೆ ನಡುವೆ ಜೀವನ ನಡೆಸುತ್ತಿದೆ. ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಯುವ ಬಿಜೆಪಿ ಮುಖಂಡ ಧೀರಜ್ ಮುನಿರಾಜ್ ಗುಡಿಸಲಿಗೆ ಭೇಟಿ ನೀಡಿ ನೆರವಿನ ಹಸ್ತ ಚಾಚಿದ್ದಾರೆ.
ನರಸಿಂಹಯ್ಯಗೆ ಅಂಗವಿಕಲ ವೇತನಕ್ಕೆ ವ್ಯವಸ್ಥೆ, ಹುಡುಗನ ವಿದ್ಯಾಭ್ಯಾಸಕ್ಕೆ ಹಣಕಾಸು ನೆರವು, ಮನೆ ಕಟ್ಟಲು ಬೇಕಾದ ಇಟ್ಟಿಗೆ, ಸಿಮೆಂಟ್ ಶೀಟು ನೀಡುವುದ್ದಾಗಿ ಹೇಳಿದ್ದಾರೆ. ಜೊತೆಗೆ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ಹೇಳಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಇವರೊಂದಿಗೆ ತಾಲೂಕಾಡಳಿತವೂ ಕುಟುಂಬಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಮಾಡಿಕೊಡುತ್ತಿದೆ. ತಾಲೂಕಿನ ಸಹೃದಯಿ ದಾನಿಗಳೂ ಕುಟುಂಬಕ್ಕೆ ಇತರ ಸಣ್ಣಪುಟ್ಟ ಸಹಾಯ ಮಾಡಲು ಮುಂದಾಗುತ್ತಿವೆ.
PublicNext
19/01/2022 10:08 pm