ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಮಂಡನೆಗೆ ಅದ್ಯಾಕೋ ಏನೋ ಕಾಲವೇ ಕೂಡಿಬರ್ತಿಲ್ಲ. ಬಜೆಟ್ ಮಂಡನೆಗೆ ಸಿದ್ದತೆ ನಡೆದಾಗ ಹಳೆ ಸಂಪ್ರದಾಯವನ್ನು ಮುರಿದಿರುವುದು ಬೆಂಗಳೂರು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.
ಪೂರ್ವ ಚರ್ಚೆ ಇಲ್ಲದೇ ಏಕಾಏಕಿ ಬಜೆಟ್ ಮಂಡನೆಗೆ ಅನುಮತಿ ಪಡೆಯಲು ಮುಂದಾಗಿದ್ದು, ನಿನ್ನೆ ಮಂಡನೆಯಾಗಬೇಕಿದ್ದ ಬಿಬಿಎಂಪಿ ಬಜೆಟ್ ಮುಂದೂಡಿಕೆಯಾಗಿದೆ.
ಬಜೆಟ್ ಮಂಡನೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿಯವರದ್ದೇ ಪ್ರಮುಖ ಪಾತ್ರ. ಸಾಮಾನ್ಯವಾಗಿ ನಗರದ ಶಾಸಕರು, ಸಚಿವರು, ಮಾಜಿ ಮೇಯರ್ ಮತ್ತು ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಬಜೆಟ್ ಮಂಡನೆ ಮಾಡಬೇಕು. ಈ ವಾಡಿಕೆಗೆ ಕತ್ತರಿ ಹಾಕಿ ಸಚಿವ ಆರ್.ಅಶೋಕ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಬಿಎಂಪಿ ಬಜೆಟ್ ಮಂಡನೆಯಲ್ಲಿ ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆ ಇರುವುದು ಹೊಸತೇನಲ್ಲ. ಎಲ್ಲಾ ಪ್ರಾಥಮಿಕ ತಯಾರಿ ಮಾಡಿಕೊಂಡಿದ್ದು, ನಿನ್ನೆ ಸಂಜೆ ಮೂರು ಗಂಟೆಗೆ ಬಿಬಿಎಂಪಿ ಬಜೆಟ್ಗೆ ತಡೆ ಬಿದ್ದಿರುವುದು ಬಿಜೆಪಿ ಹಿರಿಯ ಮುಖಂಡರ ಮಧ್ಯೆ ಮತ್ತು ಪಾಲಿಕೆ ಹಿರಿಯ ಅಧಿಕಾರಿಗಳ ಮಧ್ಯೆ ಇರುವ ಬಿರುಕನ್ನು ಸ್ಪಷ್ಟವಾಗಿ ತೋರಿಸಿದೆ.
ಅದರಲ್ಲೂ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.ಹೀಗಾಗಿ ಪಾಲಿಕೆ ಆಡಳಿತ ವರ್ಗದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
Kshetra Samachara
31/03/2022 04:40 pm