ಬೆಂಗಳೂರು ದಕ್ಷಿಣ: ನನ್ನ ಗ್ರಾಮ ಹಾಗೂ ನನ್ನ ಜನರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ ಎಂದು ಬನ್ನೇರುಘಟ್ಟ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷ ರವಿಶ್ ಗೌಡ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಭೂತನಹಳ್ಳಿ ಗ್ರಾಮದ ರವೀಶ್ ಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಭೂತನಹಳ್ಳಿ ಗ್ರಾಮ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದ್ದು ಇಂದಿಗೂ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಮುಂದುವರೆದಿದೆ. ಅಲ್ಲದೇ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಭೂತನಹಳ್ಳಿ ಗ್ರಾಮ ಹಿಂದುಳಿದಿದೆ. ಹಾಗಾಗಿ ಗ್ರಾಮದ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಜೊತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಶ್ರಮಿಸುವುದಾಗಿ ನೂತನ ಉಪಾಧ್ಯಕ್ಷ ರವಿಶ್ ಗೌಡ ತಿಳಿಸಿದರು. ಬೆಂ.ದಕ್ಷಿಣ ಶಾಸಕ ಕೃಷ್ಣಪ್ಪ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬನ್ನೇರುಘಟ್ಟ ಜಯರಾಮ್ ರವರ ಮಾರ್ಗದರ್ಶನದಲ್ಲಿ ಪಂಚಾಯಿತಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದಾಗಿ ಅವರು ತಿಳಿಸಿದರು.
ಒಟ್ಟು 29 ಮತಗಳನ್ನು ಪಡೆಯುವ ಮೂಲಕ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇದೇ ವೇಳೆ ಮಾತನಾಡಿದ ಅವರು ಬನ್ನೇರುಘಟ್ಟ ಗ್ರಾಮದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಜಯರಾಮ್ ರವರ ಮಾರ್ಗದರ್ಶನದಲ್ಲಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಂಬರುವ ದಿನಗಳಲ್ಲಿ ತಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆಯನ್ನು ನೀಡಿ ಗ್ರಾಮದ ಅಭಿವೃದ್ಧಿ ಪಣ ತೊಡುವುದಾಗಿ ಹೇಳಿದರು. ನೂತನ ಉಪಾಧ್ಯಕ್ಷರಿಗೆ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಅಭಿನಂದನೆಗಳನ್ನು ಸಲ್ಲಿಸಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
Kshetra Samachara
03/06/2022 07:48 pm