ಬೆಂಗಳೂರು ದಕ್ಷಿಣ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 'ಕಾವೇರಿ' ಹೆಸರಿನ ಝೀಬ್ರಾ, ಮರಿಯೊಂದಕ್ಕೆ ಜನ್ಮ ನೀಡಿದೆ ಎಂದು ಉದ್ಯಾನವನದ ಉಪ ನಿರ್ದೇಶಕ ಹರೀಶ್ ತಿಳಿಸಿದ್ದಾರೆ.
ತಾಯಿ ಹಾಗೂ ಮರಿಯ ಚಿತ್ರ ಬಿಡುಗಡೆ ಮಾಡಿದ ಅವರು, 10 ವರ್ಷದ ಕಾವೇರಿ ಹಾಗೂ ಭರತ್ ಎಂಬ ಜೋಡಿಗೆ ಮರಿ ಜನಿಸಿದೆ. ಇದರೊಂದಿಗೆ ಪಾರ್ಕ್‌ನಲ್ಲಿ ಝೀಬ್ರಾಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿದೆ.
ಇನ್ನು ವೈದ್ಯ ಉಮಾಶಂಕರ್ ಮಾತನಾಡಿ, ತಾಯಿ ಮತ್ತು ಮರಿ ಆರೋಗ್ಯವಾಗಿದ್ದು, ಆದರೆ ಇನ್ನೂ ಲಿಂಗ ಪತ್ತೆಯಾಗಿಲ್ಲ. ಅದು ನಮ್ಮ ಪಶುವೈದ್ಯಕೀಯ ತಂಡ ಹಾಗೂ ಪ್ರಾಣಿ ಪಾಲಕರ ವೀಕ್ಷಣೆಯಲ್ಲಿ ಇರುತ್ತದೆ ಎಂದರು.
ಇನ್ನು ಝೀಬ್ರಾ ಗರ್ಭಾವಸ್ಥೆ ಅವಧಿ ಸುಮಾರು ಒಂದು ವರ್ಷವಾಗಿದ್ದು, ಕರಿಯ ಕಂದು ಬಣ್ಣದ ಪಟ್ಟೆ ಹೊಂದಿದ್ದು ಅದು ಅಂತಿಮವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಪ್ರಸ್ತುತ ಹೊಸದಾಗಿ ಹುಟ್ಟಿದ ಮರಿ ಮತ್ತು ತಾಯಿಯು ಇತರ ಮೂರು ಝೀಬ್ರಾಗಳಾದ ಭರತ್, ಹರಿಶ್ಚಂದ್ರ ಮತ್ತು ಕಬನಿಯೊಂದಿಗೆ ಇದ್ದು ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದಾಗ ಈ ಮರಿಯನ್ನೂ ವೀಕ್ಷಿಸಬಹುದು ಎಂದು ತಿಳಿಸಿದರು.
- ಹರೀಶ್ ಗೌತಮನಂದ 'ಪಬ್ಲಿಕ್ ನೆಕ್ಸ್ಟ್' ಆನೇಕಲ್
PublicNext
05/04/2022 08:50 am