ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋರ್ಟ್‌ಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಆನೇಕಲ್ ವಕೀಲರ ಒತ್ತಾಯ

ಆನೇಕಲ್: ಗಣರಾಜ್ಯೋತ್ಸವದ ದಿನದಂದು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರ ನಡೆಯನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದರು. ಆನೇಕಲ್ ಕೋರ್ಟ್ ಆವರಣದಲ್ಲಿ ವಕೀಲರು ರಾಜ್ಯದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಡುವಂತೆ ರಾಜ್ಯ ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.

ಆನೇಕಲ್ ಜಸ್ಟೀಸ್ ಲೀಗಲ್ ಅಡ್ವೈಸರ್ಸ್ ವತಿಯಿಂದ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಮುಂಭಾಗ ತಹಶೀಲ್ದಾರ್ ದಿನೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಭಾರತ ಸಂವಿಧಾನ ರೂಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸುವಂತಹ ಕೃತ್ಯಗಳು ನ್ಯಾಯಾಧೀಶರಿಂದಲೇ ಆಗಿರುವುದು ನ್ಯಾಯಾಂಗ ವ್ಯವಸ್ಥೆಯೇ ತಲೆ ತಗ್ಗಿಸುವಂತಹದ್ದಾಗಿದೆ. ಇಂತಹ ಕೃತ್ಯಗಳು ಮುಂದೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹಿರಿಯ ವಕೀಲ ಶಿವರಾಜ್ ಮುತ್ಸಂದ್ರ ಒತ್ತಾಯಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಎಲ್ಲ ಜಾತಿ, ಸಮುದಾಯಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಸಮಾನತೆ, ಸಹೋದರತೆ, ಸಹಬಾಳ್ವೆ ತತ್ವದ ಹಿನ್ನೆಲೆಯಲ್ಲಿ ಸಂವಿಧಾನ ರಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಡುವ ಮೂಲಕ ಅವರನ್ನು ಗೌರವಿಸುವಂತಹ ಕಾರ್ಯಕ್ಕೆ ಚಾಲನೆ ಸಿಗುವಂತಾಗಲಿಯೆಂದು ಅವರು ಒತ್ತಾಯಿಸಿದ್ದಾರೆ.

ತಹಶೀಲ್ದಾರ್ ದಿನೇಶ್ ಮಾತನಾಡಿ, ರಾಜ್ಯದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಇಡುವಂತಹ ಪ್ರಸ್ತಾಪವನ್ನು ಆನೇಕಲ್ ವಕೀಲರು ಮನವಿ ಸಲ್ಲಿಸಿದ್ದಾರೆ. ಇವರ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಸರಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವೇಳೆ ಆನೇಕಲ್ ಪುರಸಭಾ ಅಧ್ಯಕ್ಷ ಪದ್ಮನಾಭ, ವಕೀಲರಾದ ಸತೀಶ್, ಬಿಕ್ಕನಹಳ್ಳಿ ವೆಂಕಿ, ರಾನಕೃಷ್ಣಪ್ಪ, ಗುಮ್ಮಳಾಪುರ ವೆಂಕಟೇಶ್, ಇಮ್ರಾನ್, ಗೌರೇನಹಳ್ಳಿ ಮಂಜುನಾಥ್, ರಾಘವೇಂದ್ರ, ಆನಂದ್, ಸೊಪ್ಪಳ್ಳಿ ಸುಜೀಂದ್ರ, ವಡ್ಡರಪಾಳ್ಯ ಮುನಿಕೃಷ್ಣ, ಬಾಬು, ಪುರುಷೋತ್ತಮ್ ಚಿಕ್ಕಹಾಗಡೆ ಸೇರಿ ಹಲವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

29/01/2022 09:12 am

Cinque Terre

342

Cinque Terre

0

ಸಂಬಂಧಿತ ಸುದ್ದಿ