ಬೆಂಗಳೂರು: ರಣಮಳೆಗೆ ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ಅದ್ರಲ್ಕೂ ಮಹದೇವಪುರ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕಾಡುಗೋಡಿಯ ಬೆಳತೂರು, ಸೀಗೆಹಳ್ಳಿ, ಚನ್ನಸಂದ್ರ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿದೆ.
ಸೀಗೆಹಳ್ಳಿ, ಬೆಳತೂರು ರಾಜಕಾಲುವೆ ತುಂಬಿ ರಸ್ತೆ, ವಿಲ್ಲಾಗಳು, ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಎಲೆಮಲ್ಲಪ್ಪ ಶೆಟ್ಟಿಕೆರೆ, ಸಾದರ ಮಂಗಲ ಸೇರಿದಂತೆ ನಗರದ ಹತ್ತಕ್ಕೂ ಹೆಚ್ಚು ಕೆರೆಗಳ ನೀರು ಕೃಷ್ಣಗಿರಿ ಡ್ಯಾಮ್ ಗೆ ಸಂಪರ್ಕ ಹೊಂದುವ ಮಾರ್ಗ ಇದಾಗಿದೆ. ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ನೀರು ಒಳ ಬರದಂತೆ ಮರಳು ಮೂಟೆ ಹಾಕಿ ಸ್ಥಳೀಯರು ತಡೆಯುವ ಪ್ರಯತ್ನ ಮಾಡ್ತಿದ್ದಾರೆ.
600 ಕ್ಕೂ ಹೆಚ್ಚು ವಿಲ್ಲಾಗಳಿರುವ ಸಾಯಿ ಗಾರ್ಡನ್ ಗೂ ನೀರು ನುಗ್ಗಿದ್ದು, ಹೊಸಕೋಟೆ ಮಾರ್ಗದಿಂದ ಕಾಡುಗೋಡಿ ವರೆಗೂ ಸುಮಾರು ಐದು ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿದೆ. ಜತೆಗೆ ಕೇಂದ್ರ ಸರ್ಕಾರಿ ಕಚೇರಿಗಳಿಗೂ ಮಳೆನೀರು ನುಗ್ಗಿದ್ದು, ಕಚೇರಿಗಳಿಗೆ ಬೀಗ ಹಾಕಲಾಗಿದೆ. ಕಾಡುಗೋಡಿ ಬಳಿಯಿರುವ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ, ಸಸ್ಯ ಸಂರಕ್ಷಣೆ, ವಿವಿಧ ಕೇಂದ್ರಗಳಿರುವ ಜೈವಿಕ ಭವನಕ್ಕೆ ನೀರು ನುಗ್ಗಿದೆ.
PublicNext
06/09/2022 12:24 pm