ಬೆಂಗಳೂರು: ಬೆಂಗಳೂರಿನ ಹೆಬ್ಬಾಳ, ಮಹದೇವಪುರ ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಸೆಂಟ್ ಜಾನ್ಸ್ ಆಸ್ಪತ್ರೆ, ಭಟ್ಟರಹಳ್ಳಿ ಜಂಕ್ಷನ್, ವೈಟ್‍ಫೀಲ್ಡ್ ರಸ್ತೆಗಳು ಸೇರಿದಂತೆ 10 ಪ್ರಮುಖ ಪ್ರದೇಶಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಿಸುವುದರ ಜತೆ ಟ್ರಾಫಿಕ್ ಸಿಗ್ನಲ್ ಗಳನ್ನು ಸಿಂಕ್ರೋನೈಜ್ ಮಾಡಲು ಕ್ರಮಕೈಗೊಳ್ಳಬೇಕು. ಈ ಕೆಲಸದ ಮೇಲುಸ್ತುವಾರಿಯನ್ನು ಖುದ್ದು ಡಿಸಿಪಿಗಳೇ ವಹಿಸಿಕೊಳ್ಳಬೇಕೆಂದು ಸಿಎಂ ಸೂಚಿಸಿದರು.
ಸಂಚಾರ ದಟ್ಟಣೆ ನಿವಾರಣೆಗೆ, ನಗರಾಭಿವೃದ್ಧಿ ಮತ್ತು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರು, ಬಿಎಂಆರ್‍ಸಿಎಲ್, ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ಒಟ್ಟಾಗಿ ಪರಿಹಾರ ಕ್ರಮಗಳನ್ನು ರೂಪಿಸಿ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ದಾರಿಮಾಡಿಕೊಡಬೇಕು. ಮಳೆಯಾದಾಗ ನೀರುನುಗ್ಗಿ ಸಂಚಾರ ದಟ್ಟಣೆಯಾಗುತ್ತಿರುವ 50 ಸ್ಥಳಗಳನ್ನು ತಕ್ಷಣ ದುರಸ್ತಿ ಮಾಡಲು ಸೂಚಿಸಿದರು.
ಬಿಡಬ್ಲ್ಯುಎಸ್ ಎಸ್ ಬಿ, BMRCL ನವರು ಕಾಮಗಾರಿಗಾಗಿ ಅಗೆದ ರಸ್ತೆ ಹಾಗೆಯೇ ಇವೆ. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಆ ರಸ್ತೆಗಳ ದುರಸ್ತಿ ಕಾರ್ಯ ನಡೆಯಬೇಕಾಗಿದೆ.ಸಂಚಾರ ಪೊಲೀಸರ ಸಂಖ್ಯಾಬಲ ಹೆಚ್ಚಿಸಿ. ವಾಹನ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ ನೀಡಿ ಎಂದು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಸಿಎಂ ತಿಳಿಸಿದ್ದಾರೆ. ನಿರ್ಭಯಾ ಯೋಜನೆಯಲ್ಲಿ ಅಳವಡಿಸುವ ಕ್ಯಾಮರಾಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಆದ್ಯತೆ ಮೇರೆಗೆ ಕ್ಯಾಮರಾ ಅಳವಡಿಸಲು ಸೂಚಿಸಿದರು.
ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಮತ್ತು ಹೈಡೆನ್ಸಿಟಿ ರಸ್ತೆಗಳ ಒತ್ತುವರಿ, ಅಡೆತಡೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ. ನಗರ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ. ಈ ಕುರಿತು ಕೈಗೊಂಡಕ್ರಮಗಳ ಕುರಿತು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ, ತಾವೇ ಖುದ್ದು ವಲಯವಾರು ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
PublicNext
25/06/2022 10:31 pm