ಬೆಂಗಳೂರು: ʼಕಾಮೆಡ್-ಕೆʼ ಇದು ಸಿಇಟಿ ಮಾದರಿಯಲ್ಲೇ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಯೋ ಪರೀಕ್ಷೆ. ಇದೀಗ ಸರ್ಕಾರ, ಈ ಪರೀಕ್ಷೆಗೆ ಮೇಜರ್ ಸರ್ಜರಿ ಮಾಡಲು ಹೊರಟಿದ್ದು, ಕಾಮೆಡ್-ಕೆ ವಿಲೀನಕ್ಕೆ ಕೈಹಾಕಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೋರ್ಟ್ ಮೊರೆ ಹೋಗುವ ಎಚ್ಚರಿಕೆಯನ್ನೂ ನೀಡಲಾಗ್ತಿದೆ.
ಒಂದೇ ಕಾಲೇಜಿನ ಎಂಜಿನಿಯರಿಂಗ್ ಸೀಟಿಗೆ ಕಾಮೆಡ್-ಕೆ ಹಾಗೂ ಸಿಇಟಿ ಪರೀಕ್ಷೆ ಬದಲಾಗಿ ಒಂದೇ ಕೇವಲ ಸಿಇಟಿ ಮಾತ್ರ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸುಗಳ ಸೀಟುಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿರುವ ಶೇ. 45ರಷ್ಟು ಸೀಟುಗಳ ಪ್ರವೇಶಕ್ಕಾಗಿ ನಡೆಸಲಾಗುತ್ತಿದೆ. ಅದೇ ರೀತಿ ಖಾಸಗಿ ಕಾಲೇಜುಗಳಲ್ಲಿರುವ ಶೇ. 30 ಸೀಟು ಹಾಗೂ ಶೇ. 25 ಸೀಟುಗಳನ್ನು ಎನ್‌ಆರ್‌ಐ ಮತ್ತು ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟುಗಳನ್ನು ಕಾಮೆಡ್-ಕೆ ಪರೀಕ್ಷೆ ನಡೆಸಿ ಹಂಚಿಕೆ ಮಾಡಲಾಗುತ್ತಿದೆ.
ಇನ್ನು ಕಾಮೆಡ್-ಕೆ ಪರೀಕ್ಷೆಯನ್ನು ರಾಜ್ಯದ 150 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ದೇಶದ ವಿವಿಧ 40 ವಿವಿಗಳಲ್ಲಿ ಲಭ್ಯವಿರುವ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ ಪರೀಕ್ಷೆ ನಡೆಸುತ್ತದೆ. ಹೀಗಾಗಿ, ದೇಶಾದ್ಯಂತ 154 ನಗರಗಳ 230 ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತಿದೆ.
ಒಂದು ವೇಳೆ ಖಾಸಗಿಯವರ ಅನುಕೂಲಕ್ಕಾಗಿ ರಾಜ್ಯದಲ್ಲಿರುವ ವೃತ್ತಿಪರ ಕೋರ್ಸ್‌ಗಳ ಸೀಟಿಗೆ ದೇಶಾದ್ಯಂತ ಒಂದೇ ಪರೀಕ್ಷೆ ನಡೆಸಿದರೆ, ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಇತ್ತ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಕಾಮೆಡ್-ಕೆ ಕಾರ್ಯದರ್ಶಿ ಎಸ್.ಕುಮಾರ್ ಎಚ್ಚರಿಸಿದ್ದಾರೆ.
ಇನ್ನು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಇಂಜಿನಿಯರಿಂಗ್ ಕೋರ್ಸ್ ನ ಶುಲ್ಕ ಶೇ.10ರಷ್ಟು ಏರಿಕೆಗೆ ಸರ್ಕಾರ ಮುಂದಾಗಿದೆ. ಕಳೆದ ವರ್ಷ ಸರ್ಕಾರಿ ಸಿಇಟಿ ಶುಲ್ಕದಲ್ಲಿ 10 ಸಾವಿರ ರೂ. ಏರಿಕೆ ಮಾಡಲಾಗಿತ್ತು! ಇದೀಗ ಮತ್ತೊಮ್ಮೆ ಶುಲ್ಕ ಏರಿಕೆ ಮಾಡಲಾಗಿದೆ. ಇದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ.
ಒಂದ್ಕಡೆ ಇಂಜಿನಿಯರಿಂಗ್ ಶುಲ್ಕ ಹೆಚ್ಚಳ, ಮತ್ತೊಂದೆಡೆ ಕಾಮೆಡ್-ಕೆ ವಿಲೀನ ಸಂಬಂಧ, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ದೇಶಾದ್ಯಂತ ನಡೆಯುವ ಕಾಮೆಡ್-ಕೆ ರದ್ದಾದ್ರೆ, ಕೋರ್ಟ್ ಮೆಟ್ಟಿಲೇರುವ ಸಿದ್ಧತೆ ನಡೆಯುತ್ತಿವೆ. ಸದ್ಯ, ಉನ್ನತ ಶಿಕ್ಷಣ ಇಲಾಖೆ ಹೇಗೆ ಉಪಶಮನ ಮಾಡುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.
ವರದಿ - ಗಣೇಶ್ ಹೆಗಡೆ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
24/06/2022 01:02 pm