ಬೆಂಗಳೂರು: ರಾಜ್ಯದ ಜನ ಧಗೆಗೆ ತತ್ತರಿಸಿದ್ದು, ಬಿಸಿಲಿನ ರಕ್ಷಣೆಗೆ ಇನ್ನಿಲ್ಲದ ಮಾರ್ಗಗಳ ಮೊರೆಹೋಗುತ್ತಿದ್ದಾರೆ. ಆದರೆ, ಇಂಧನ ಇಲಾಖೆಯಲ್ಲಿ ಮಾತ್ರ ಬಿರುಬೇಸಗೆಯಲ್ಲೂ ತಂಗಾಳಿ’ ಬೀಸುತ್ತಿದೆ.
ಸಾಮಾನ್ಯವಾಗಿ ಬೇಸಗೆ ಬರುತ್ತಿದ್ದಂತೆ ಏಕಾಏಕಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿತ್ತು. ಮತ್ತೂಂದೆಡೆ ನಿರೀಕ್ಷಿತ ಉತ್ಪಾದನೆ ಆಗುತ್ತಿರಲಿಲ್ಲ. ಹೀಗಾಗಿ, ಬಿಸಿಲಿನ ಮೊದಲ ಶಾಖ ಇಂಧನ ಇಲಾಖೆಗೇ ತಟ್ಟುತ್ತಿತ್ತು. ಪರಿಣಾಮ ಇಲಾಖೆಯು ಪ್ರತೀ ವರ್ಷ ಮಕ್ಕಳ ಪರೀಕ್ಷೆ ವೇಳೆ ಲೋಡ್‌ಶೆಡ್ಡಿಂಗ್ ಮಂತ್ರ ಪಠಿಸುತ್ತಿತ್ತು. ಆದರೆ, ಈ ಬಾರಿಯ ಬೇಸಗೆಯ ಚಿತ್ರಣ ತದ್ವಿರುದ್ಧವಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆ ಜತೆಗೆ ಹೆಚ್ಚುವರಿಯಾಗಿರುವುದನ್ನು ಮಾರಾಟ ಮಾಡಿ ಲಾಭ ಕೂಡ ಗಳಿಸುತ್ತಿದೆ.
ವಾರದ ಹಿಂದೆ ದೇಶಾದ್ಯಂತ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಮಹಾ ರಾಷ್ಟ್ರ, ತಮಿಳುನಾಡು ಹಲವು ರಾಜ್ಯಗಳಲ್ಲಿ ವಿದ್ಯುತ್ ಅಭಾವ ತಲೆದೋರಿತ್ತು. ಆದರೆ, ಕರ್ನಾಟಕದಲ್ಲಿ ಜಲ, ಶಾಖೋತ್ಪನ್ನ ಘಟಕಗಳು, ನ್ಯೂಕ್ಲಿಯರ್, ನವೀಕರಿಸಬಹುದಾದ ಇಂಧನ ಸೇರಿದಂತೆ ಎಲ್ಲ ಮೂಲಗಳಿಂದ ಪೂರೈಕೆ ಆಗುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಆಗಿಲ್ಲ. ಬದಲಿಗೆ 800ರಿಂದ 1,000 ಮೆ.ವಾ. ವಿದ್ಯುತ್ ಹೆಚ್ಚುವರಿಯಾಗಿದ್ದು, ಅದನ್ನು ನೆರೆಯ ಆಂಧ್ರ, ತಮಿಳುನಾಡಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ನೂರಾರು ಕೋಟಿ ಲಾಭ ಬರುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ನಿತ್ಯ ಸರಾಸರಿ ವಿದ್ಯುತ್ ಉತ್ಪಾದನೆ 14ರಿಂದ 15 ಸಾವಿರ ಮೆ.ವಾ. ಆಸುಪಾಸು ಇದೆ. ಇದರಲ್ಲಿ ಶೇ. 50ರಷ್ಟು ಸೋಲಾರ್‌ನಿಂದಲೇ ಬರುತ್ತಿದೆ. ಉಳಿದರ್ಧದಲ್ಲಿ ಜಲ, ಶಾಖೋತ್ಪನ್ನ ಮತ್ತು ಪವನದಿಂದ ಪೂರೈಕೆ ಆಗುತ್ತದೆ. ಆ ಸೋಲಾರ್ ವಿದ್ಯುತ್ ಪೀಕ್ ಲೋಡ್‌ನಲ್ಲಿಯೂ (ಬೆಳಗ್ಗೆ 8ರಿಂದ 11) ಬರುವುದರಿಂದ ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಶೇ. 20ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಈ ಎಲ್ಲ ಕಾರಣಗಳಿಂದ ಬೇಡಿಕೆ ಇಳಿಮುಖವಾಗಿದೆ.
Kshetra Samachara
03/05/2022 05:21 pm