ಸಿಲಿಕಾನ್ ಸಿಟಿ ರಸ್ತೆಯನ್ನು ಗುಂಡಿಮುಕ್ತ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆದರೂ ಸಹ ಉದ್ಯಾನ ನಗರಿ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ.
ಫಿಕ್ಸ್ ಮೈ ಸ್ಟ್ರೀಟ್ ಎಂಬ ಅಪ್ಲಿಕೇಶನ್ ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆಯ ಜಿಯೋ ಮ್ಯಾಪ್ ಮೂಲಕ ನಡೆಸಿರುವ ಸಮೀಕ್ಷೆಯಲ್ಲಿ ಬೆಂಗಳೂರು ನಗರದ ರಸ್ತೆಗುಂಡಿಗಳ ಅಂಕಿ-ಅಂಶಗಳು ಸಿಕ್ಕಿವೆ. ಜನರೇ ಕೊಟ್ಟಿರುವ ರಸ್ತೆ ಗುಂಡಿಗಳ ಲೆಕ್ಕ ನೋಡಿ ಬಿಬಿಎಂಪಿ ಅಧಿಕಾರಿಗಳೇ ತಲೆ ಕೆಡಿಸಿಕೊಳ್ಳಬೇಕು.
ಸಮೀಕ್ಷೆಯಲ್ಲಿ ನಗರದಲ್ಲಿ ಇನ್ನೂ 4545 ರಸ್ತೆ ಗುಂಡಿಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ. ರಸ್ತೆ ಗುಂಡಿಯನ್ನು ಮುಚ್ಚುವ ಕೆಲಸವನ್ನು ಮಾಡಲಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ.
ಈಗಾಗಲೇ ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ನಗರದಲ್ಲಿ ಹಲವಾರು ಅಪಘಾತಗಳು ನಡೆಯುತ್ತಿವೆ. ಇನ್ನು ಮಳೆಗಾಲ ಆರಂಭವಾಗುತ್ತಿದೆ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಘಾತಕ್ಕೆ ಆಹ್ವಾನ ನೀಡುತ್ತವೆ. ಬಿಬಿಎಂಪಿ ರಸ್ತೆ ಗುಂಡಿಗಳಿಗೆ ಯಾವಾಗ ಮುಕ್ತಿ ಹಾಡಲಿದೆ? ಎಂದು ಕಾದು ನೋಡಬೇಕು.
ಬೊಮ್ಮನಹಳ್ಳಿ 1076, ದಾಸರಹಳ್ಳಿ 867, ಪೂರ್ವ 566, ಮಹದೇವಪುರ 329, ಆರ್. ಆರ್. ನಗರ 1068, ದಕ್ಷಿಣ 414, ಪಶ್ಚಿಮ 225 ರಸ್ತೆ ಗುಂಡಿಗಳು ಇವೆ.
ಪೂರ್ವ ವಲಯದಲ್ಲಿ ಅತಿ ಹೆಚ್ಚು ಎಂದರೆ 2066 ಗುಂಡಿಗಳು ಪತ್ತೆಯಾಗಿವೆ. ದಾಸರಹಳ್ಳಿ, ಯಲಹಂಕ, ಮಹದೇವಪುರದಲ್ಲಿ ಕಡಿಮೆ ಗುಂಡಿಗಳಿವೆ. ಬೆಂಗಳೂರಿನ 5 ವಿಧಾನಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಯನ್ನು ಮುಚ್ಚಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಲಾಗಿದೆ . ಉಳಿದ 22 ಕಡೆ ಪಾಲಿಕೆಯಿಂದಲೇ ರಸ್ತೆ ಗುಂಡಿಗಳನ್ನು ಮುಚ್ಚಲು ತೀರ್ಮಾನ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳ ಹಾವಳಿ ತಪ್ಪಿದ್ದಲ್ಲ. ಅವೈಜ್ಞಾನಿಕ ಹಂಪ್, ಕೇಬಲ್ ಅಳವಡಿಕೆಗೆ ರಸ್ತೆ ಅಗೆತ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯದ ನೆಪದಲ್ಲಿ ರಸ್ತೆ ಅಗೆದು ಟಾರ್ ಹಾಕದೇ ಬಿಡಲಾಗಿರುತ್ತದೆ. ಇವೆಲ್ಲದರ ನಡುವೆ ಮಳೆರಾಯ ನಿರಂತರವಾಗಿ ಅಬ್ಬರಿಸಿರುವ ಪರಿಣಾಮ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಮಳೆ ಬಂದರೆ ಗುಂಡಿಗಳು ಕೆರೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದಾಗಿ ವಾಹನ ಸವಾರರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
10/08/2022 08:37 pm