ಆನೇಕಲ್: ಯುದ್ದಪೀಡಿತ ಉಕ್ರೇನ್ ನಿಂದ ಆನೇಕಲ್ ಪಟ್ಟಣ ಜೈಭೀಮ್ ನಗರದ ನಿವಾಸಿ ಗೋಕುಲ್ ಕೃಷ್ಣ ತಾಯ್ನಾಡಿಗೆ ಆಗಮಿಸಿದ್ದು, ಭಾರತ ದೇಶದ ಧ್ವಜ ಹಿಡಿದ ಬಳಿಕವೇ ಬದುಕಿ ಬರುತ್ತೇವೆ ಎಂಬ ವಿಶ್ವಾಸ ಬಂತು ನಮ್ಮನ್ನು ಸುರಕ್ಷಿತವಾಗಿ ಕರೆತಂದ ಭಾರತ ಸರ್ಕಾರಕ್ಕೆ ಹಾಗೂ ಅಧಿಕಾರ ವರ್ಗಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಆನೇಕಲ್ ಪಟ್ಟಣದ ಗೋಕುಲ್ ಕೃಷ್ಣ ರನ್ನ ಶಾಸಕ ಬಿ. ಶಿವಣ್ಣ ಭೇಟಿಯಾಗಿ ಬಳಿಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ವಿದ್ಯಾರ್ಥಿ ಗೋಕುಲ್ ಕೃಷ್ಣ ಮಾತನಾಡಿ, ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿ ಅಲ್ಲಿನ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಜನರು ಜೀವ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದು, ಬಂಕರ್ ಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದೇವು.
ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಲ್ಲರಲ್ಲೂ ಸಾಕಷ್ಟು ಆತಂಕ ಎದುರಾಗಿತ್ತು, ಆ ಸಂಧರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳೆಲ್ಲರೂ ಒಂದೇ ಗ್ರೂಪ್ ನಲ್ಲಿ ಇದ್ದೇವು. ಭಾರತ ರಾಯಭಾರಿಯಿಂದ ಹೊರಟು ಆದಷ್ಟು ಬೇಗ ಗಡಿಗೆ ಬರಬೇಕೆಂದು ತಿಳಿಸಿದರು.
ಯಾರಲ್ಲೂ ಸಹ ಧೈರ್ಯ ಇರಲಿಲ್ಲ ಆಗ ಭಾರತ ಬಾವುಟವನ್ನು ಹಿಡಿದಾಗ ನಮಗೆ ಧೈರ್ಯ ಬಂತು, ಅಲ್ಲಿಂದ ನಾವು ಭಾರತದ ಧ್ವಜದ ಸಮೇತವಾಗಿಯೇ ನೂರಾರು ಜನ ವಿದ್ಯಾರ್ಥಿಗಳು ಗಡಿಯನ್ನ ತಲುಪಿದೆವು. ಭಾರತ ಸರ್ಕಾರ ಹಾಗೂ ರಾಯಬಾರಿ ಕಚೇರಿ ಅಧಿಕಾರಿಗಳು (ಎಂಬೆಸ್ಸಿ) ಬಾರ್ಡರ್ ನಿಂದ ವಿದ್ಯಾರ್ಥಿಗಳನ್ನ ಸಾಕಷ್ಟು ಜಾಗರೂಕತೆಯಿಂದ ಕರೆತಂದರು.
Kshetra Samachara
09/03/2022 10:04 pm