ʼದೇವನಹಳ್ಳಿʼ ಎಂದರೆ ಕೆಂಪೇಗೌಡ ವಂಶಸ್ಥರ ಕೋಟೆ, ವಿಮಾನ ನಿಲ್ದಾಣ ನೆನಪಿಗೆ ಬರೋದು ಸಹಜ. ಅದಕ್ಕಿಂತ ಮುಖ್ಯವಾಗಿ ಈ ಪ್ರದೇಶ ಶ್ರೇಷ್ಠ ಸಾಮ್ರಾಜ್ಯದ ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಎನ್ನುತ್ತಿದೆ ದೇವನಹಳ್ಳಿಲಿ ಇದೀಗ ದೊರೆತಿರೊ ಹೊಯ್ಸಳ ಶಾಸನ. ಹಾಗಾದರೆ, ಹೊಯ್ಸಳರ ಆ ರಾಜ ಯಾರು!? ಈ ಪ್ರದೇಶವನ್ನು ಯಾರು ಯಾರಿಗೆ ದಾನ ನೀಡಿದರು ತಿಳಿಯೋಣ.
ಇತಿಹಾಸದ ಅಧ್ಯಯನಕ್ಕೆ ಕೋಟೆ, ದೇವಾಲಯ, ಶಾಸನ, ತಾಳೆಗರಿ, ಗ್ರಂಥ, ನಗ-ನಾಣ್ಯ ಮೂಲಾಧಾರ. ಇವುಗಳಲ್ಲಿ ಶಾಸನಗಳೇ ಅತಿಮುಖ್ಯ ಸಾಕ್ಷಿಗಳೆನಿಸುತ್ತವೆ. ಬೇಲೂರು ಚೆನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಯಾರಿಗೆ ಗೊತ್ತಿಲ್ಲ ಹೇಳಿ. ಇಂತಹ ಪ್ರಸಿದ್ಧ ರಾಜಮನೆತನಕ್ಕೆ ಸೇರಿದ 2ನೇ ವೀರಬಲ್ಲಾಳನ ಕಾಲಕ್ಕೆ ಸೇರಿದ ಶಾಸನ ದೇವನಹಳ್ಳಿಲಿ ಪತ್ತೆಯಾಗಿದೆ! ಹವ್ಯಾಸಿ ಶಾಸನ ಪ್ರಿಯ, ಶಾಲಾ ಶಿಕ್ಷಕ ಗುರುಸಿದ್ದಯ್ಯ, ಈ ಶಿಲಾಶಾಸನ ಸಂರಕ್ಷಿಸಿದ್ದಾರೆ. ದೇವನಹಳ್ಳಿ ಪಟ್ಟಣದ ಅಕ್ಕುಪೇಟೆಯ GSG ಲೇಔಟ್ ನಲ್ಲಿ ಕಲ್ಲುಬಂಡೆ ಪತ್ತೆಯಾಗಿದ್ದು, ಸ್ಥಳೀಯರ ಸಹಕಾರದಿಂದ ಜೆಸಿಬಿಯಿಂದ ಕೆಲಸ ಮಾಡಿಸಿ, ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಶಾಸನ ಪತ್ತೆಯಾದ ಕೂಡಲೇ ಗುರುಸಿದ್ದಯ್ಯ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಶಾಸನ ತಜ್ಞ ಮೈಸೂರಿನ ಡಾ.ನಾಗರಾಜಪ್ಪರಿಗೆ ಶಾಸನದ ಪೋಟೊ ಕಳುಹಿಸಿದ್ದಾರೆ. ಶಾಸನದಲ್ಲಿಕ್ರಿ.ಶ. 1343ರಲ್ಲಿ 'ಹೊಯ್ಸಳ' ರಾಜ "ಬಲ್ಲಾಳ"ನು ತಿರುವಣ್ಣಾಮಲೈ ಪಟ್ಟಣ ಆಳುತ್ತಿರುವಾಗ, ಅವನ ಸಾಮಂತಾಧಿಪತಿ ಮಂಚಯ ನಾಯಕನ ಮಗ ಸೊಣೆಯ ನಾಯಕನೂ ನಲ್ಲೂರ ನಾಡಪ್ರಭು ಬೊಮ್ಮೀಜಿಯ, ಜಯರೀಜಿ, ಮಾರಪ್ಪಾಜಿ ಸಹಿತ ಸಮಸ್ತ ನಾಡಪ್ರಭುಗಳು ಬಯರಿಸೇಟಿಗೆ ದಾನ ನೀಡಿದರು ಎಂದಿದೆ.
PublicNext
14/02/2022 11:45 am