ಆನೇಕಲ್: ತಾಲ್ಲೂಕಿನ ಮರಸೂರಿಗೆ ಸೇರಿದ ಕುಗ್ರಾಮ ಹಳೇ ಊರಿನ ಪ್ರತೀಕ್ಷಾ ಎಂಬ 5ರ ಹರೆಯದ ಬಾಲಕಿ ಹುಲಾ ಹೂಪ್ ರಿಂಗ್ ತಿರುಗಿಸುವುದರಲ್ಲಿ ಇಂಟರ್ ನೇಷನಲ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದ್ದಾಳೆ. ಈಕೆ ಸತತ 44 ನಿಮಿಷ, 4 ಸೆಕೆಂಡ್ ತಿರುಗಿಸಿ ಸಾಧನೆ ಮಾಡಿದ್ದಾಳೆ!
ಹಳೇಊರು ಶ್ರೀನಿವಾಸ್ ಹಾಗೂ ದೀಪಾ ದಂಪತಿ ಪುತ್ರಿಯಾದ ಈಕೆ ಇಂಡಿಯನ್ ಚೈಲ್ಡ್ ಟ್ಯಾಲೆಂಟ್ ಅವಾರ್ಡ್, ಇಂಡಿಯನ್ ಸ್ಟಾರ್ ಐಕಾನ್, ಕಿಡ್ಸ್ ಅಚೀವರ್ಸ್ ಅವಾರ್ಡ್, ಕರ್ನಾಟಕ ಅಚೀವರ್ಸ್ ಆಫ್ ಬುಕ್ ಆಫ್ ರೆಕಾರ್ಡ್, ಸುವರ್ಣ ಸಾಧನಾ ಶ್ರೀ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಲಾಕ್ ಡೌನ್ ವೇಳೆ ತಂದೆಯ ಮೊಬೈಲ್ ನಲ್ಲಿ ಹುಲ್ ಹೂಪ್ ರಿಂಗ್ ತಿರುಗಿಸುವುದನ್ನು ನೂಡಿ ತನಗೂ ಹುಲ್ ಹೂಪ್ ಕೊಡಿಸುವಂತೆ ಕೇಳಿಕೊಂಡಿದ್ದಳು. ಬಳಿಕ ಮೊಬೈಲ್ ನೋಡಿಕೊಂಡು ರಿಂಗ್ ತಿರುಗಿಸುವುದನ್ನು ರೂಢಿಸಿದ್ದಳು. ಇದನ್ನು ಗಮನಿಸಿದ ತಾಯಿ ದೀಪಾ ವೀಡಿಯೊ ಮಾಡಿದ್ದರು.
ಸ್ವತಃ ತಾವೇ ಗುರುವಾಗಿ ತರಬೇತಿ ನೀಡಿ ವೀಡಿಯೊ ತುಣುಕನ್ನು ಇಂಟರ್ ನೇಷನಲ್ ರೆಕಾರ್ಡ್ ಸಂಸ್ಥೆಗೆ ಕಳಿಸಿದರು. ಸಂಸ್ಥೆ ಎದುರೂ 44 ನಿಮಿಷ, 4 ಸೆಕೆಂಡ್ಸ್ ತಿರುಗಿಸಿ ದಾಖಲೆ ಮಾಡಿದ್ದರು. ಪ್ರತೀಕ್ಷಾ ಬಹುಮುಖ ಪ್ರತಿಭೆ. ನಟನೆ, ಚಿತ್ರಕಲೆ, ಡ್ಯಾನ್ಸ್, ಮಾಡೆಲಿಂಗ್ ನಲ್ಲೂ ಕೌಶಲ್ಯ ಹೊಂದಿದ್ದಾಳೆ. 3 ದಿನಗಳ ಹಿಂದೆ ಅಂಡಮಾನ್ ನಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಆನ್ಲೈನ್ ಮೂಲಕ ಸ್ಪರ್ಧಿಸಿದ್ದು, 4ನೇ ಸ್ಥಾನ ಪಡೆದಿದ್ದಾಳೆ.
PublicNext
25/01/2022 08:12 am