ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೊರೊನಾ ಸೋಂಕಿತರ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಮಾಸ್ಕ್ ಧರಿಸುವ ಕಡ್ಡಾಯ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ.
ಹೌದು. ಇನ್ನುಮುಂದೆ ನಗರದಲ್ಲಿ ಮಾಸ್ಕ್ ಹಾಕದವರಿಗೆ, ದೈಹಿಕ ಅಂತರ ಕಾಪಾಡದವರಿಗೆ ದಂಡ ವಿಧಿಸುವಂತಿಲ್ಲ. ಬದಲಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾತ್ರ ನಡೆಸಲು ಮೌಖಿಕ ಸೂಚನೆ ನೀಡಲಾಗಿದೆ.
ಮಾಸ್ಕ್ ಧರಿಸಿದ ಹಾಗೂ ಸಾಮಾಜಿಕ ಅಂತರ ಕಾಯದ ಜನರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್ಸ್, ದಿನವೊಂದಕ್ಕೆ ಒಂದೂವರೆ ಲಕ್ಷ ರೂ.ಗೂ ಅಧಿಕ ದಂಡ ಸಂಗ್ರಹಿಸುತ್ತಿದ್ದರು. ಆದರೆ ಭಾನುವಾರ ಮಾಸ್ಕ್ ಧರಿಸದ 20 ಜನರಿಂದ 5 ಸಾವಿರ ರೂ. ಮಾತ್ರ ದಂಡ ಸಂಗ್ರಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು, "ಕೇಂದ್ರ ಸರ್ಕಾರದ ಸೂಚನೆಯಂತೆ ಕೊರೊನಾ ನಿಯಮಾವಳಿ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯೂ ಇನ್ನು ಅನ್ವಯವಾಗುವುದಿಲ್ಲ. ಯಾವುದೇ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ಇದರಡಿ ದಾಖಲಾಗುವುದಿಲ್ಲ. ಆದರೆ ಕೇಂದ್ರ ಆರೋಗ್ಯ ಇಲಾಖೆ ಆಗಷ್ಟ್‌ವರೆಗೂ ಕೋವಿಡ್ ನಿಯಮಾವಳಿ ಮುಂದುವರಿಸುವ ಚಿಂತನೆಯಲ್ಲಿದೆ. ದೇಶದಲ್ಲಿ ಕೋವಿಡ್ ಇಳಿಕೆಯಾಗಿದ್ದರೂ, ವಿಶ್ವದ ಬೇರೆ ಕಡೆಗಳಲ್ಲಿ ನಾಲ್ಕನೇ ಅಲೆ ತೀವ್ರವಾಗಿದೆ. ಹೀಗಾಗಿ ಎಲ್ಲಾ ಕಡೆ ಪ್ಯಾಂಡಮಿಕ್ – ಎಂಡಮಿಕ್ ಆಗುವವರೆಗೂ ಮಾಸ್ಕ್ ನಿಯಮದಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ. ಮನೆಯಿಂದ ಹೊರಬಂದರೆ ಮಾಸ್ಕ್, ಹಾಗೂ ಕೋವಿಡ್ ಕಂಟೈನ್ ಮೆಂಟ್ ನಿಯಮಗಳನ್ನು ರದ್ದುಮಾಡದೆ, ಮುಂದುವರೆಸಲು ತಿಳಿಸಲಾಗಿದೆ" ಎಂದು ತಿಳಿಸಿದ್ದಾರೆ.
PublicNext
29/03/2022 01:10 pm