ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ 2022ರ ಏಪ್ರಿಲ್/ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಸಚಿವ ನಾಗೇಶ್ ಬಿಡುಗಡೆ ಮಾಡಿದರು.
‘2020ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಉತ್ತೀರ್ಣ ಪ್ರಮಾಣ 0.08ರಷ್ಟು ಏರಿಕೆಯಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.
‘ಕೋವಿಡ್ ಭೀತಿಯ ನಡುವೆಯು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಯಿತು. ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,83,563 ವಿದ್ಯಾರ್ಥಿಗಳ ಪೈಕಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 48.71ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ಶೇ. 64.97ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 72.53ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಸಚಿವರು ತಿಳಿಸಿದರು.
‘91,106 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 2,14,115, ದ್ವಿತೀಯ ದರ್ಜೆ 68,444 ಹಾಗೂ 49,301 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಸಚಿವರು ತಿಳಿಸಿದರು.
‘ಹಿಂದಿನ ವರ್ಷಗಳಂತೆ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿಯು ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನ ಹಾಗೂ ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕ್ರಮವಾಗಿ ಕೊನೆಯ ಮೂರು ಸ್ಥಾನದಲ್ಲಿವೆ. ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳ ಫಲಿತಾಂಶ ಸುಧಾರಣೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.
‘ಜೂನ್ ತಿಂಗಳಾಂತ್ಯಕ್ಕೆ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿವೆ’ ಎಂದು ಸಚಿವರು ಮಾಹಿತಿ ನೀಡಿದರು.
PublicNext
18/06/2022 07:11 pm