ಬೆಂಗಳೂರು: ಜೀವಮಾನ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಮಹಿಳೆ ಪಡೆದುಕೊಂಡಿದ್ದ ಚಿನ್ನದ ಪದಕ ಕಳ್ಳತನವಾಗಿ ಆರು ತಿಂಗಳಾದರೂ ಆರೋಪಿಗಳ ಪತ್ತೆ ಮಾತ್ರ ಇನ್ನೂ ಆಗಿಲ್ಲ. ಕೋಣನಕುಂಟೆ ಪೊಲೀಸರು ಪ್ರಕರಣವನ್ನ ಸವಾಲಾಗಿ ಸ್ವೀಕರಿಸಿ ವಿವಿಧ ಆಯಾಮಗಳಲ್ಲಿ ನಿರಂತರ ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣ ಬೇಧಿಸುವುದು ಪೊಲೀಸರಿಗೆ ಕಬ್ಬಿಣದ ಕಡಲೆಯಂತಾಗಿದೆ.
ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರಂಭದಲ್ಲಿ ಖದೀಮರನ್ನು ಹೆಡೆಮುರಿಕಟ್ಟುವ ವಿಶ್ವಾಸದಲ್ಲಿ ತನಿಖೆ ಆರಂಭಿಸಿದ್ದರು. ಆದರೆ ಆರೋಪಿಗಳು ಯಾವುದೇ ಸುಳಿವು ಬಿಟ್ಟುಕೊಡದೆ ಪಾರಮ್ಯ ಮೆರೆದ ಪರಿಣಾಮ ಸತತವಾಗಿ ತನಿಖೆ ನಡೆಸಿದರೂ ಪ್ರಕರಣಕ್ಕೆಇತಿಶ್ರೀ ಹಾಡಲು ವಿಫಲರಾಗಿದ್ದಾರೆ. ತಾಂತ್ರಿಕ ಹಾಗೂ ಬೇಸಿಕ್ ಪೊಲೀಸಿಂಗ್ ರೀತಿಯಲ್ಲಿ ತನಿಖೆ ನಡೆಸಿದರೂ ಫಲಿತಾಂಶ ಕಾಣದೆ ಪ್ರಕರಣ ಬೇಧಿಸುವುದು ಕಗ್ಗಂಟಾಗಿದೆ.
ಕರಕುಶಲ ವಿಭಾಗದ ಬ್ಲಾಟಿಕ್ ಮತ್ತು ಟೈ ಅಂಡ್ ಡೈ ಕಲೆಯಲ್ಲಿ ಹೇಮಶೇಖರ್ ಎಂಬುವರು 2002ರಲ್ಲಿ ಹಾಗೂ 2014ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಹಾಗೂ ಪ್ರಣವ್ ಮುಖರ್ಜಿ ಅವರಿಂದ ಶಿಲ್ಪಗುರು ಹೆಸರಿನ ಚಿನ್ನದ ಪದಕ ಪಡೆದುಕೊಂಡಿದ್ದರು. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಪ್ರಜಾನಗರದಲ್ಲಿ ವಾಸವಾಗಿದ್ದ ಹೇಮಶೇಖರ್, ಕಳೆದ ಮಾರ್ಚ್ ಮನೆಯಲ್ಲಿದ್ದ ಚಿನ್ನದ ಪದಕ ಕಳ್ಳತನವಾಗಿತ್ತು. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ತ್ವರಿತವಾಗಿ ಬೇಧಿಸಲು ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಸದ್ಯ ಕಳ್ಳತನವಾಗಿ ಆರು ತಿಂಗಳಾದರೂ ಪ್ರಕರಣ ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
PublicNext
11/09/2022 11:08 am