ಬೆಂಗಳೂರು: ಶನಿವಾರ ತಡರಾತ್ರಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಿಂದ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಮೇಲೆ ಹಲ್ಲೆ ನಡೆದಿರುವುದು ಬೆಳಕಿಗೆ ಬಂದಿದೆ.
ನಗರದ ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಪೊರೇಷನ್ ಮಾರ್ಗವಾಗಿ ಸಾಗರದಿಂದ ತಿರುವಣ್ಣಾಮಲೈ ಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡ್ರೈವರ್ ಪ್ರಕಾಶ್, ರಿಸರ್ವೇಶನ್ ಮಾಡಿದ್ದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕಾರ್ಪೊರೇಷನ್ ಬಳಿ ಬಸ್ ನಿಲ್ಲಿಸಿದ್ದರು.
ಈ ವೇಳೆ ಹಿಂದೆ ಎರಡು ಮೂರು ಬಸ್ ಗಳು ಬಂದು ನಿಂತಿವೆ. ಕೂಡಲೇ ಬಸ್ ತೆರವುಗೊಳಿಸುವಂತೆ ಟ್ರಾಫಿಕ್ ಸಿಬ್ಬಂದಿ ಆವಾಜ್ ಹಾಕಿದ್ದಾರೆ. ಆದರೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕಾಯುತ್ತಿದ್ದ ಪ್ರಕಾಶ್ ಬಸ್ ಅನ್ನು ನಿಲ್ದಾಣದಿಂದ ತೆಗೆದಿಲ್ಲ.
ಬಸ್ ತಗೆಯದಿದ್ದಾಗ ಡ್ರೈವಿಂಗ್ ಸೀಟ್ ಮೇಲೆ ಕುಳಿತಿದ್ದ ಡ್ರೈವರ್ ಪ್ರಕಾಶ್ ಮೇಲೆ ಏಕಾ ಏಕಿ ಹಲ್ಲೆ ಮಾಡಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆ ನಡೆದ ಪರಿಣಾಮ ಡ್ರೈವರ್ ಪ್ರಕಾಶ್ ಮೂಗಿಗೆ ಗಾಯವಾಗಿದೆ. ಪ್ರಕರಣದ ಸಂಬಂಧ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಪ್ರಕಾಶ್ ಎಸ್.ಜೆ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ.
PublicNext
04/09/2022 01:33 pm