ನೆಲಮಂಗಲ: ಅವ್ರಿಬ್ರೂ ಕೂಲಿ ಕಾರ್ಮಿಕರು. ಉತ್ತರ ರಾಜ್ಯದಿಂದ ಕೆಲಸ ಅರಸಿ ಬಂದಿದ್ರು. ನಿನ್ನೆ ವಾರದ ಬಟವಾಡೆ ಹಣ ಬೇರೆ ಆಗಿತ್ತು. ಆದ್ರೆ, ಅವರು ಬಂದ ಹಣದಲ್ಲಿ ಕಂಠಪೂರ್ತಿ ಕುಡಿದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ತಂದ್ಕೊಂಡು ಅವರಲ್ಲೊಬ್ಬ ಭೀಕರವಾಗಿ ಕೊಲೆಯಾಗಿದ್ದಾನೆ. ಈ ಘಟನೆ ನೆಲಮಂಗಲ ತಾಲೂಕಿನ ಬೈರನಹಳ್ಳಿ ಗ್ರಾಮದಲ್ಲಿನಡೆದಿದೆ.
ಜಾರ್ಖಂಡ್‌ನ ಪಾಲಮು ಜಿಲ್ಲೆಯ ಅಕಾವುನಿ ಗ್ರಾಮದ ನಿವಾಸಿ ಜ್ಞಾನೇಶ್ವರ್ ಕುಮಾರ್ ಕೊಲೆಯಾದ ವ್ಯಕ್ತಿ. ಮೃತನ ಸ್ನೇಹಿತ ಮಿಲನ್ ಎಂಬಾತನೊಂದಿಗೆ ಕೂಲಿ ಕಾರ್ಮಿಕನಾಗಿ ಇದೇ ಟಿ.ಬೇಗೂರು ಸಮೀಪದ ಬೈರನಹಳ್ಳಿಯ ಅನೂಪನಗರದಲ್ಲಿ ಉಡುಪಿ ಮೂಲದ ಸುಧಾಕರ್ ಎಂಬಾತ ಮನೆ ನಿರ್ಮಾಣ ಮಾಡ್ತಿದ್ರು. ಅಲ್ಲಿ ಅವರುಗಳು ಸೆಂಟ್ರಿಂಗ್ ಕೂಲಿ ಕಾರ್ಮಿಕರಾಗಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ರು.
ಅಸಲಿಗೆ ಸುಧಾಕರ್ ಮನೆ ನಿರ್ಮಾಣದ ಹೊಣೆ ಹೊತ್ತಿದ್ದು, ಇಲ್ಲಿ ಲೇಬರ್ ಚಾರ್ಜ್ ಹೆಚ್ಚು ಅಂತ ಹೇಳಿ, ಕಳೆದ 10 ದಿನಗಳ ಹಿಂದೆ ಕೊಲ್ಲಾಪುರದ ಕಂಟ್ರಾಕ್ಟರ್ ಯೋಗೇಶ್ ಎಂಬಾತನಿಗೆ ಮನೆ ಕಾಂಟ್ರಾಕ್ಟ್ ಒಪ್ಪಿಸಿದ್ರು. ಜಾರ್ಖಂಡ್‌ನಿಂದ ಸೆಂಟ್ರಿಂಗ್ ಕೆಲಸಕ್ಕೆ ಬಂದಿದ್ದ ಇಬ್ಬರಿಗೆ ಸುಧಾಕರ್, ಸ್ಥಳದಲ್ಲೇ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಟ್ಟಿದ್ರು. ಆದ್ರೆ, ಇಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಸುಧಾಕರ್ ನಿರ್ಮಾಣ ಹಂತದ ಮನೆ ಬಳಿ ಕ್ಯೂರಿಂಗ್ ಮಾಡಿಸಲು ಬಂದು ಇವರನ್ನು ಕೂಗಿದ್ದಾರೆ. ಆಗ ಯಾರು ಬಾರದಿದ್ದ ಕಾರಣ ಶೆಡ್ ಬಳಿ ಬಂದು ನೋಡಿದ್ದಾರೆ, ಬ್ಲಾಂಕೆಟ್ ಹೊದ್ಕೊಂಡು ಮಲಗಿರೋರು ಯಾರು ಎಂದು ಜ್ಞಾನೇಶ್ವರ್ ಕುಮಾರ್ @ ರಾಜು ಮೃತದೇಹ ನೋಡುತ್ತಲೇ ಶಾಕ್ ಆಗಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ವಿಷಯ ತಿಳಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ರು ಮತ್ತು ಡಿವೈಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡುತ್ತಿದ್ದಂತೆ ಮೃತ ಜ್ಞಾನೇಶ್ವರ್ ಕುಮಾರ್ ಜೊತೆಗಿದ್ದ ಸ್ನೇಹಿತ ಮಿಲನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಮೇಲ್ನೋಟಕ್ಕೆ ನಿನ್ನೆ ಕೆಲಸದ ವಾರದ ಬಟವಾಡೆ ಹಣ ಬಂದಿದ್ದು, ಇಬ್ಬರು ರಾತ್ರಿ ಕಂಠಪೂರ್ತಿ ಎಣ್ಣೆ ಹೊಡೆದು, ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಕುಡಿದ ಮತ್ತಿನಲ್ಲಿದ್ದ ಮಿಲನ್, ಜ್ಞಾನೇಶ್ವರ್ ಕುಮಾರ್ ಹತ್ಯೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆಂದು ಶಂಕೆ ವ್ಯಕ್ತವಾಗಿದೆ ಎಂದು ಬೆಂ.ಗ್ರಾ. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಸದ್ಯ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ರು ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರನ್ನ ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡ ಮಿಲನ್ ಪತ್ತೆಗಾಗಿ ಪೊಲೀಸರು ಪ್ರತ್ಯೇಕ ತಂಡಗಳನ್ನ ರಚಿಸಿ, ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
PublicNext
07/08/2022 10:44 pm