ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭ್ರಷ್ಟಾಚಾರ ಆರೋಪದಡಿ ಇ.ಡಿ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಶಾಂತಿನಗರ ಹಾಗೂ ಶೇಷಾದ್ರಿಪುರದಲ್ಲಿ ಪ್ರತ್ಯೇಕ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಕೃತ್ಯ ಎಸಗಲು ದುಷ್ಕರ್ಮಿಗಳು ಪೂರ್ವಯೋಜಿತ ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿತ್ತು. ಶಾಂತಿನಗರ ಹಾಗೂ ಶೇಷಾದ್ರಿಪುರದಲ್ಲಿ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ. ಯಾವುದೇ ಮಾಹಿತಿ ನೀಡದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸುವಾಗ ಕಿಡಿಗೇಡಿಗಳು ಪ್ರತ್ಯೇಕ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಶಾಂತಿನಗರದಲ್ಲಿ ಕಾರಿಗೆ ಬೆಂಕಿ ಹಚ್ಚಿದ ಘಟನೆಗೆ ಮಂಜುನಾಥ, ದಕ್ಷಿಣಮೂರ್ತಿ, ಅಗಸ್ತಿನ, ರಿಯಾನ್ ಸಹಿತ ಐವರನ್ನು ಬಂಧಿಸಲಾಗಿದೆ. ಇನ್ನೂ ಆರು ಮಂದಿಯನ್ನು ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.
* ಮೊದಲೇ ಕಾರು ತಂದು ನಿಲ್ಲಿಸಿದ್ದರು!: ಪ್ರತಿಭಟನೆ ಮುನ್ನ ಪ್ರತ್ಯೇಕ ಎರಡು ಸ್ಥಳಗಳಲ್ಲಿ ಪೂರ್ವ ನಿಯೋಜಿತದಂತೆ ಕಾರು ಪಾರ್ಕ್ ಮಾಡಿ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆಯೇ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಶಾಂತಿನಗರದಲ್ಲಿ ಥಿನ್ನರ್ ಬಳಸಿದರೆ ಶೇಷಾದ್ರಿಪುರಂ ನಲ್ಲಿ ಪೆಟ್ರೋಲ್ ಸುರಿದು ದುಷ್ಕೃತ್ಯ ಎಸಗಿದ್ದಾರೆ. ಬಂಧಿತ ಐವರು ಆರೋಪಿಗಳು ರಾಜಕೀಯ ಪಕ್ಷಕ್ಕೆ ಸೇರಿದ ಕಾರ್ಯಕರ್ತರಾಗಿದ್ದು, ಈ ಐವರ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
PublicNext
21/07/2022 11:01 pm