ಬೆಂಗಳೂರು: ಬೆಳಗಿನ ಜಾವ 3 ಗಂಟೆಯ ಸಮಯ. ಮನೆಯಲ್ಲಿ ಮಲಗಿದ್ದವರ ಮೂಗಿಗೆ ಸುಟ್ಟವಾಸನೆ ಬಡಿದಿತ್ತು. ಬಾಗಿಲು ತೆಗೆದು ಹೊರನೋಡಿದಾಗ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಬೆಂಕಿಯಲ್ಲಿ ಧಗಧಗಿಸುತ್ತಿದ್ದವು. ಅಷ್ಟಕ್ಕೂ ಈ ಘಟನೆಗೆ ಸಾಕ್ಷಿಯಾಗಿದ್ದು ವಿಜಯನಗರ ಪೈಪ್ ಲೈನ್ ನ 6 ನೇ ಅಡ್ಡರಸ್ತೆ.
ಸದಾ ಪೋಲಿ ಅಲಿಯುತ್ತಾ ಏರಿಯಾದಲ್ಲಿ ಪೋಕರಿಗಳಂತೆ ಸುತ್ತಾಡ್ತಿದ್ದ ಹುಡುಗರು ಮಾಡಿರೋ ಕೃತ್ಯ ಇದು ಎಂದು ಹೇಳಲಾಗ್ತಿದೆ. ಇಷ್ಟಕ್ಕೂ ಈ ಅವಾಂತರಕ್ಕೆ ಕಾರಣವಾಗಿದ್ದು ರಾತ್ರಿ ಹೇಳಿದ ಬುದ್ಧಿಮಾತು. ಹೌದು... ರಾತ್ರಿ ಹೊತ್ತು ಗಲಾಟೆ ಮಾಡಬೇಡಿ, ಸಿಗರೇಟ್,ಗಾಂಜಾ ಸೇದಬೇಡಿ. ಕುಡಿದು ಕಿರುಚಾಡಬೇಡಿ ಎಂದು ಹೇಳಿದ್ದಕ್ಕೆ ಪುಂಡರ ಗುಂಪು ಬೈಕ್ ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಮನೆ ಮುಂದೆ ಪಾರ್ಕ್ ಮಾಡಿದ್ದ ಶಾಂತಾರಾಜು ಮತ್ತು ನೇತ್ರಾವತಿ ದಂಪತಿಯ ಇದೇ ಮೊಪೆಡ್ ಬೈಕ್ ಹಾಗೂ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಸುಜುಕಿ ಆಕ್ಸಿಸ್ ಬೈಕ್ ಸುಟ್ಟು ಕರಕಲಾಗಿದೆ.
ಈ ಏರಿಯಾದಲ್ಲಿ ಮಧ್ಯರಾತ್ರಿವರೆಗೂ ಪುಂಡರ ಹಾವಳಿ ಜಾಸ್ತಿಯಾಗಿತ್ತು. ಇದೇ ವಿಚಾರವಾಗಿ ನೇತ್ರಾವತಿ ಕಳೆದ ಶನಿವಾರ ಮನೆ ಮುಂದೆ ಕುಳಿತು ಗಾಂಜಾ ಹೊಡೆದು ದಾಂಧಲೆ ಮಾಡ್ತಿದ್ದ ಹುಡುಗರಿಗೆ ಬುದ್ಧಿ ಹೇಳಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಪುಂಡರು ನಿನ್ನೆ ಮಧ್ಯರಾತ್ರಿ ಪೆಟ್ರೋಲ್ ತಂದು ಬೈಕ್ ಮೇಲೆ ಸುರಿದು ಬೆಂಕಿಹಚ್ಚಿದ್ದಾರೆ ಎನ್ನಲಾಗ್ತಿದೆ. ಘಟನೆ ಸಂಬಂಧ ಶಾಂತಾರಾಮ್ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ಶುರುವಾಗಿದೆ.
Kshetra Samachara
07/07/2022 06:13 pm