ಬೆಂಗಳೂರು : ಹಣ ಕೊಡದಿದ್ದರೆ ತಂದೆಯ 2ನೇ ಪತ್ನಿಯನ್ನು ಕೊಲೆ ಮಾಡುವುದಾಗಿ ಪೀಡಿಸುತ್ತಿದ್ದ ಪುತ್ರನ ತಲೆಗೆ ರಾಡ್ ನಿಂದ ಹಲ್ಲೆ ನಡೆಸಿ ಕತ್ತು ಬಿಗಿದು ತಂದೆಯೇ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ಆರ್ ಟಿನಗರದ ಚಾಮುಂಡಿ ನಗರದಲ್ಲಿ ನಡೆದಿದೆ. ಈ ನಗರದ ನಿವಾಸಿ ಮೊಹಮದ್ ಸುಲೇಮಾನ್ ಕೊಲೆಯಾದ ವ್ಯಕ್ತಿ, ಆತನ ತಂದೆ ಮೊಹಮ್ಮದ್ ಸಂಶೀರ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.
ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿರುವ ಆರೋಪಿ ಸಂಶೀರ್ ನ ಮೊದಲ ಪತ್ನಿಯ ಮಗ ಸುಲೇಮಾನ್ ಹೆಬ್ಬಾಳದ ಭುವನೇಶ್ವರಿನಗರದ ಗ್ಯಾರೆಜ್ ನಲ್ಲಿ ಮೆಕ್ಯಾನಿಕ್ ಕೆಲಸ ಮಾಡ್ತಿದ್ದ. 7 ವರ್ಷದ ಹಿಂದೆ ಸಂಶೀರ್ ಮೊದಲ ಪತ್ನಿಯನ್ನು ಬಿಟ್ಟು 2ನೇ ಪತ್ನಿಯ ಜತೆಗೆ ವಾಸಿಸುತ್ತಿದ್ದ. ಸುಲೇಮಾನ್ ಆಗಾಗ ತಂದೆಯಿಂದ ಹಣಕ್ಕೆ ಪೀಡಿಸುತ್ತಿದ್ದ. ಇತ್ತೀಚೆಗೆ ತಂದೆ ಸಂಶೀರ್ ಮಗನಿಗೆ ಹಣ ಕೊಡೊದನ್ನ ನಿರಾಕರಿಸಿದ್ರು. ಇದರಿಂದ ಕುಪಿತಗೊಂಡ ಸುಲೇಮಾನ್, ಹಣ ಕೊಡದಿದ್ದರೆ 2ನೇ ಪತ್ನಿಯನ್ನು ಕೊಲೆ ಮಾಡುತ್ತೇನೆ ಎಂದು ತಂದೆಗೆ ಬೆದರಿಸುತ್ತಿದ್ದ.
ಇದರಿಂದ ಆತಂಕಗೊಂಡ ಸಂಶೀರ್ 2ನೇ ಪತ್ನಿಯನ್ನು ಟ್ಯಾನರಿ ರಸ್ತೆಯಲ್ಲಿರುವ ತವರು ಮನೆಗೆ ಕಳುಹಿಸಿದ್ದ. ಭಾನುವಾರ ರಾತ್ರಿ ಸಂಶೀರ್ ನ ಮನೆಗೆ ಬಂದ ಸುಲೇಮಾನ್ ಹಣ ಕೊಡುವಂತೆ ಮತ್ತೆ ಬೆದರಿಸಿದ್ದ. ಹಣ ಕೊಡಲು ನಿರಾಕರಿಸಿದಾಗ 2ನೇ ಪತ್ನಿಯ ತವರು ಮನೆಗೆ ಹೋಗಿ ಆಕೆಯನ್ನು ಕೊಲೆ ಮಾಡುವುದಾಗಿ ಗಲಾಟೆ ಮಾಡಿದ್ದ.
ಈ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ಜಗಳ ನಡೆದು ತಾರಕಕ್ಕೇರಿತ್ತು. ಆಕ್ರೋಶಗೊಂಡ ಸಂಶೀರ್ ರಾಡ್ ನಿಂದ ಮಗ ಸುಲೇಮಾನ್ ತಲೆಗೆ ಹಲ್ಲೆ ನಡೆಸಿದ್ದ. ಪರಿಣಾಮ ಗಂಭೀರ ಗಾಯಗೊಂಡು ಸುಲೇಮಾನ್ ಕುಸಿದು ಬಿದ್ದಿದ್ದ.
ನಂತರ ಕೇಬಲ್ ವೈಯರ್ ನಿಂದ ಸುಲೇಮಾನ್ ನ ಕತ್ತು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿರುವ ಆರೋಪಿ ಸಂಶೀರ್ ತಂದೆ ಇಂದು ಮುಂಜಾನೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಆರ್ಟಿನಗರ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
Kshetra Samachara
06/06/2022 09:24 pm