ಬೆಂಗಳೂರು: ಇನ್ಸ್ಟಾಗ್ರಾಮ್ ನಲ್ಲಿ SORRY ಅಂತ ಪೋಸ್ಟ್ ಮಾಡಿದ್ದ ಆತ ರಾತ್ರಿ ಕಳೆದು ಬೆಳಗಾಗುವುದರೊಳಗೆ ಶವವಾಗಿದ್ದ. ಚಿಲ್ ವಿ ಆಲ್ ಡೈ ಅಂತಾ ಬರ್ಕೊಂಡಿದ್ದ ಆತ ಸಾವಿಗೆ ಶರಣಾಗೇ ಬಿಟ್ಟಿದ್ದ. ಆದ್ರೆ ಆತನ ಈ ನೋವಿಗೆ..ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದು ಮಾತ್ರ ನಿಗೂಢವಾದ್ದು, ಪ್ರೇಮ ವೈಫಲ್ಯ ಕಾರಣ ಇರಬಹುದು ಎನ್ನಲಾಗ್ತಿದೆ.
ಈ ಫೋಟೋದಲ್ಲಿ ಕಾಣ್ತಿರೊ ಯುವಕನ ಹೆಸ್ರು ಮನೋಜ್. ಮಂಡ್ಯ ಮೂಲದ ರಮೇಶ್ ಗೌಡ ಮತ್ತು ಲತಾ ದಂಪತಿಯ ಪುತ್ರ. ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಬಂದು ನೆಲೆಸಿದ್ರು.
19 ವರ್ಷದ ಮನೋಜ್ ನಾಗರಬಾವಿ ಬಳಿಯ ಕೆಎಲ್ ಇ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದ್ತಿದ್ದ. ಎಲ್ಲರ ಜೊತೆ ಖುಷಿ ಖುಷಿಯಾಗೇ ಇದ್ದ. ಆದ್ರೆ ಅದೇನಾಯ್ತೋ ಏನೊ. ಒಂದು ತಿಂಗಳಿಂದ ಕಾಲೇಜಿಗೂ ಹೋಗ್ತಿರ್ಲಿಲ್ವಂತೆ. ಅಷ್ಟೇ ಅಲ್ಲ ಒಂದು ವಾರದಿಂದ ವಾಟ್ಸ್ ಆ್ಯಪ್ ಸ್ಟೇಟಸ್, ಇನ್ಸ್ಟಾಗ್ರಾಮ್ ನಲ್ಲಿ ಸ್ಯಾಡ್ ಸ್ಟೋರಿಸ್ ಹಾಕ್ತಿದ್ನಂತೆ. ಇವತ್ತು ಬೆಳಗ್ಗೆ ಎಷ್ಟು ಕರೆ ಮಾಡಿದ್ರು ಉತ್ತರಿಸದಿದ್ದಾಗ ಮನೋಜ್ ತಂದೆಗೆ ಸ್ನೇಹಿತರು ಕರೆ ಮಾಡಿದ್ದಾರೆ. ಆಗ ಮಗ ಸತ್ತಿರೋ ವಿಚಾರ ಗೊತ್ತಾಗಿದೆ.
ಮನೋಜ್ ನ ಮನೆಯ ಪಕ್ಕದಲ್ಲಿಯೇ ಅಜ್ಜಿ ಮನೆ ಇದೆ. ಹಾಗಾಗಿ ಪ್ರತಿ ದಿನ ಮನೆಯಲ್ಲಿ ಊಟ ಮಾಡಿ ಅಜ್ಜಿ ಮನೆಗೆ ಹೋಗಿ ಮಲಗ್ತಿದ್ದ. ಅದ್ರಂತೆ ನಿನ್ನೆ ರಾತ್ರಿ ಕೂಡ ಊಟ ಮಾಡಿ ಚಿಕ್ಕಮಗಳೂರು ಟ್ರಿಪ್ ಹೋಗೋ ಬಗ್ಗೆಯೂ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಅಜ್ಜಿ ಮನೆಗೆ ಹೋಗಿದ್ದ. ಆದ್ರೆ ರಾತ್ರಿ ಹೊತ್ತು ಮನೋಜ್ ಗೆ ಅದ್ಯಾವ ನೋವು ಅತಿಯಾಗಿ ಕಾಡಿತ್ತೋ ಗೊತ್ತಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ SORRY ಅಂತಾ ಸ್ಟೋರಿ ಹಾಕಿ ನೋಣಿಗೆ ಶರಣಾಗಿದ್ದಾನೆ.
ಸದ್ಯ ಕುಟುಂಬಸ್ಥರು ಮತ್ತು ಸ್ನೇಹಿತರು ಪ್ರೀತಿ ಪ್ರೇಮ ಏನು ಇಲ್ಲ ಅಂತಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಆತನ ಸ್ಟೇಟಸ್ ನೋಡ್ತಿದ್ರೆ ಲವ್ ಫೇಲ್ಯೂರ್ ನಿಂದಲೇ ಸಾವನ್ನಪ್ಪಿದ್ದಾನೆ ಎನ್ನುವ ಅನುಮಾನ ದಟ್ಟವಾಗಿದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
02/06/2022 07:47 pm