ಬೆಂಗಳೂರು: ದೊಡ್ಡ ಡ್ರಗ್ಸ್ ದಂಧೆ ಜಾಲವನ್ನು ಭೇದಿಸಿರುವ ಎನ್‌ಸಿಬಿ ಬೆಂಗಳೂರು ಘಟಕದ ಅಧಿಕಾರಿಗಳು ಬೆಂಗಳೂರು, ಮಧ್ಯಪ್ರದೇಶ, ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿ ನೈಜಿರಿಯಾ ಮೂಲದ ಕಿಂಗ್‌ಪಿನ್ ಸೇರಿ 9 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 34.79 ಕೆ.ಜಿ. ಹೆರಾಯಿನ್ ಹಾಗೂ 5.70 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.
ಎನ್‌ಸಿಬಿ ಅಧಿಕಾರಿಗಳು ಮೇ 24ರಂದು ದೊರೆತ ಖಚಿತ ಮಾಹಿತಿ ಮೇರೆಗೆ ಜಿಂಬಾಂಬ್ವೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯನ್ನು ವಶಕ್ಕೆ ಪಡೆದು ಆಕೆಯ ಸೂಟ್‌ಕೇಸ್ ಪರಿಶೀಲಿಸಿದಾಗ ಸೂಟ್‌ಕೇಸ್ ಕೆಳ ಭಾಗದಲ್ಲಿ 7 ಕೆ.ಜಿ. ಹೆರಾಯಿನ್ ಪತ್ತೆಯಾಗಿತ್ತು. ಬಳಿಕ ಈಕೆಗಾಗಿ ಹೊರಗಡೆ ಕಾಯುತ್ತಿದ್ದ ಮತ್ತೋರ್ವ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ನಗರದ ಲಾಡ್ಜ್‌ವೊಂದರಲ್ಲಿ ಮಾದಕವಸ್ತು ಇರಿಸಿರುವುದಾಗಿ ಮಾಹಿತಿ ನೀಡಿದ್ದಾಳೆ. ಈ ಮಾಹಿತಿ ಆಧರಿಸಿ ಲಾಡ್ಜ್‌ಗೆ ತೆರಳಿ ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ 6.80 ಕೆ.ಜಿ. ಹೆರಾಯಿನ್ ಪತ್ತೆಯಾಗಿದೆ.
ಈ ಇಬ್ಬರು ಮಹಿಳಾ ಪೆಡ್ಲರ್‌ಗಳ ಮೊಬೈಲ್ ಕರೆಗಳನ್ನು ಆಧರಿಸಿ ತಾಂತ್ರಿಕ ವಿಶ್ಲೇಷಣೆ ಮಾಡಿದಾಗ, ಇವರ ಗ್ಯಾಂಗ್‌ನ ಮೂವರು ಮಹಿಳೆಯರು ಬೆಂಗಳೂರಿನಿಂದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಗೆ ತೆರಳುತ್ತಿರುವ ವಿಚಾರ ಗೊತ್ತಾಗಿದೆ. ಕೂಡಲೇ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಮಧ್ಯಪ್ರದೇಶದ ಇಂದೋರ್ ಎನ್‌ಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಳಿಕ ಇಂದೋರ್ ಎನ್‌ಸಿಬಿ ಅಧಿಕಾರಿಗಳು ಲಾಡ್ಜ್‌ವೊಂದರಲ್ಲಿ ತಂಗಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು 21 ಕೆ.ಜಿ.ಹೆರಾಯಿನ್ ಜಪ್ತಿ ಮಾಡಿದ್ದರು.
ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ದೆಹಲಿಯಲ್ಲಿ ಕುಳಿತ ನೈಜಿರಿಯಾ ಮೂಲದ ಪೆಡ್ಲರ್ ಈ ಡ್ರಗ್ಸ್ ಜಾಲವನ್ನು ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ದೆಹಲಿ ಎನ್‌ಸಿಬಿ ಅಧಿಕಾರಿಗಳ ಸಹಾಯ ಪಡೆದು ದಂಧೆಯ ಕಿಂಗ್‌ಪಿನ್ ನೈಜಿರಿಯಾ ಪ್ರಜೆ ಹಾಗೂ ಆಫ್ರಿಕಾ ಮೂಲದ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.
PublicNext
27/05/2022 09:40 pm