ದೊಡ್ಡಬಳ್ಳಾಪುರ: ಹಾವು ಕಡಿತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕುರುಬರಹಳ್ಳಿ ನಿವಾಸಿ ನಟರಾಜ್ ಶುಕ್ರವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕಳೆದ ವಾರ ಕುರುಬರಹಳ್ಳಿ ಬಸ್ ನಿಲ್ದಾಣದ ಬಳಿ ಜೆಸಿಬಿ ಟ್ರಂಚ್ ಅಗೆಯುತ್ತಿರುವುದನ್ನು ನೋಡುತ್ತಾ ನಿಂತಿದ್ದಾಗ ಹಾವೊಂದು ದುತ್ತನೆ ಎರಗಿ ಕಚ್ಚಿತ್ತು. ಕೂಡಲೇ ಅಲ್ಲಿದ್ದವರು ಆತನನ್ನು ಉಪಚರಿಸಿದರು. ಹಾವು ಕಚ್ಚಿದ ಜಾಗದಿಂದ ಮೇಲಕ್ಕೆ ದಾರದಿಂದ ಬಿಗಿಯಾಗಿ ಕಟ್ಟಿ, ಡಿ-ಕ್ರಾಸಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಆಸ್ಪತ್ರೆಯಲ್ಲಿ ದಾರ ಸಡಿಲಗೊಳಿಸಿ, ಗ್ಲೂಕೋಸ್ ಹಾಕಿದರು. ಮೂರು ಗಂಟೆ ವಿಳಂಬವಾಗಿ ಚಿಕಿತ್ಸೆ ನೀಡಿದ್ದರು. ಇದರಿಂದ ವಿಷ ದೇಹಕ್ಕೆಲ್ಲ ಹರಡಿ ಮೆದುಳಿಗೂ ವ್ಯಾಪಿಸಿತ್ತು. ಕೂಡಲೇ ನಟರಾಜನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಂದು ವಾರದಿಂದ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮಂಜುನಾಥ್ ವಿವರಿಸಿದರು. ಮೃತ ನಟರಾಜ್ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಕುಟುಂಬದ ನಿರ್ವಹಣೆಯೂ ಕಷ್ಟಕರವಾಗಿದ್ದು, ಮಗನನ್ನು ಕಳೆದುಕೊಂಡ ಪೋಷಕರಿಗೆ ದಿಕ್ಕು ತೋಚದಾಗಿದೆ.
Kshetra Samachara
27/05/2022 05:24 pm