ನೆಲಮಂಗಲ: ಅದೊಂದು ಸುಖೀ ಕುಟುಂಬ. ಎರಡು ಮಕ್ಕಳು, ಸ್ವಂತ ಮನೆ ಕಟ್ಕೊಂಡು ಸುಖಸಂಸಾರ ನಡೆಸ್ತಿದ್ರು. ಹಾಲು ಜೇನಿನಂತಿದ್ದ ಅಕ್ಕ- ಭಾವನ ಕುಟುಂಬಕ್ಕೆ ಹುಳಿ ಹಿಂಡಿದ್ದು ಮಾತ್ರ ಸ್ವಂತ ಸಹೋದರಿ! ನಾದಿನಿ ಜೊತೆಗಿದ್ದ ಅಕ್ರಮ ಸಂಬಂಧದ ವಿಚಾರ ತಿಳಿದು ಗಲಾಟೆ ಮಾಡುತ್ತಿದ್ದ ಪತ್ನಿಗೆ ಪತಿಯೇ ಮನಸೋ ಇಚ್ಛೆ ಥಳಿಸಿ, ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿಯೇ ಬಿಟ್ಟಿದ್ದ!
ಈ ದಂಪತಿ 30 ವರ್ಷದ ಶ್ವೇತಾ, 35 ವರ್ಷದ ಚೌಡೇಶ್ ಅಲಿಯಾಸ್ ಸತೀಶ್. ನೆಲಮಂಗಲ ತಾಲೂಕು ತೊಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ನಗರದಲ್ಲಿ 3 ವರ್ಷಗಳ ಹಿಂದೆ ಸ್ವಂತ ಸೂರು ಕಟ್ಕೊಂಡು ವಾಸಿಸುತ್ತಿದ್ರು. ತೊಣಚಿನಕುಪ್ಪೆ ಕಾಲೋನಿಯ ಬಾರ್‌ವೊಂದರ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಚೌಡೇಶ್, ನಿನ್ನೆ ತಡರಾತ್ರಿ ಪತ್ನಿಗೆ ತೀವ್ರ ಹಲ್ಲೆ ನಡೆಸಿ, ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.
ಬಳಿಕ ಯಾರಿಗೂ ಅನುಮಾನ ಬಾರದಿರಲಿ ಅಂತ ಪತ್ನಿ ಶ್ವೇತಾ ಲೋ ಬಿಪಿಯಿಂದಾಗಿ ಕುಸಿದು ಬಿದ್ದಿದ್ದಾಳೆ ಅಂತ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದ್ರೆ, ಆಸ್ಪತ್ರೆಯಲ್ಲಿ ಸಾವನ್ನಪ್ಪಿರೋದಾಗಿ ವೈದ್ಯರು ತಿಳಿಸಿದ್ದಾರೆ ಅಂತ ತಮ್ಮ ಸಂಬಂಧಿಗಳ ಮೂಲಕ ಮೃತ ಶ್ವೇತಾಳ ಪೋಷಕರಿಗೆ ಮಾಹಿತಿ ನೀಡಿ ನಂಬಿಸಲು ಮುಂದಾಗಿದ್ದಾನೆ.
ಆದ್ರೆ, ಇದು ಕೊಲೆ ಅಂತ ಆರೋಪಿಸಿದ ಮೃತಳ ಪೋಷಕರು ಆಸ್ಪತ್ರೆ ಶವಾಗಾರದ ಮುಂದೆಯೇ ಆರೋಪಿ ಚೌಡೇಶ್ ನ ಗ್ರಹಚಾರ ಬಿಡಿಸಲು ಮುಂದಾಗಿದ್ರು. ಆಗ ಪೊಲೀಸ್ರು ಆರೋಪಿಯನ್ನ ವಶಕ್ಕೆ ಪಡೆದಿದ್ರು. ಚಿತ್ರದುರ್ಗದ ಹಿರಿಯೂರು ತಾಲೂಕು ಆಲೂರು ಮೂಲದ ಶ್ವೇತಾ ಪೋಷಕರು ಯಾವಾಗ ಶ್ವೇತಾ ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ರೋ, ಆಗ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸ್ರು ತಮ್ಮ ವರ್ಕ್ ಆರಂಭಿಸುತ್ತಿದ್ದಂತೆ ತಾನೇ ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ತನಿಖೆ ವೇಳೆ ಶ್ವೇತಾಳ ತಂಗಿಯೊಂದಿಗೆ ಚೌಡೇಶ್‌ಗೆ 4 ವರ್ಷಗಳಿಂದ ಅಕ್ರಮ ಸಂಬಂಧ ಇದ್ದು, ಆಕೆಯನ್ನೂ ಕೂಡ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ನಾದಿನಿ ಎಲ್‌ಎಲ್‌ಬಿ ಓದುತ್ತಿದ್ದಾಗ ತಾನು ಟ್ರೈನಿಂಗ್ ಕ್ಯಾಂಪ್‌ಗೆ ಹೋಗುತ್ತಿದ್ದೇನೆಂದು ಆಕೆ ತನ್ನ ಪೋಷಕರಿಗೆ ನಂಬಿಸಿದ್ರೆ, ಇತ್ತ ಪತ್ನಿ ಶ್ವೇತಾಗೆ ಹೊರಗೆ ಕೆಲಸ ಇದೆ ಅಂತ ಸುಳ್ಳು ಹೇಳಿ ಪತಿ ಚೌಡೇಶ್ ನಾದಿನಿಯೊಂದಿಗೆ ವಿವಿಧ ರಾಜ್ಯಗಳ ಪ್ರವಾಸ ಮಾಡಿ, ಮಜಾ ಉಡಾಯಿಸ್ತಿದ್ದ!
ನಿನ್ನೆ ಪತಿ ಚೌಡೇಶನ ಹುಟ್ಟುಹಬ್ಬದ ಸಲುವಾಗಿ ಶ್ವೇತಾ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ, ಅಲ್ಲೇ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದನ್ನು ಶ್ವೇತಾ ಸ್ಟೇಟಸ್‌ಗೆ ಹಾಕಿಕೊಂಡಿದ್ಲು. ಆಗ ಚೌಡೇಶ್ ನೊಂದಿಗೆ ಶ್ವೇತಾಳ ತಂಗಿ ಜಗಳವಾಡಿದ್ದು, ನಿನಗೆ ನನಗಿಂತ ನಿನ್ನ ಹೆಂಡತಿಯ ಮೇಲೆ ಪ್ರೀತಿ ಜಾಸ್ತಿ ಎಂದಿದ್ದಾಳೆ. ಈ ವಿಚಾರವಾಗಿ ಚೌಡೇಶ್ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿರೋ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ತಂಗಿಯೇ ತನ್ನ ಅಕ್ಕನ ಬಾಳಿಗೆ ಕೊಳ್ಳಿಯಿಟ್ಟಿದ್ದು, ಇಬ್ಬರು ಕಂದಮ್ಮಗಳು ಇದೀಗ ಹೆತ್ತವರಿಲ್ಲದೆ ಅನಾಥರಾಗಿದ್ದಾರೆ.
PublicNext
05/05/2022 10:07 am