ಆನೇಕಲ್: ನೀವೇನಾದ್ರೂ ʼಮನೆ ಬಾಡಿಗೆಗೆ ಇದೆʼ ಅಂತ ಬೋರ್ಡ್ ಹಾಕಿದ್ದೀರಾ? ಹಾಗಾದ್ರೆ ಈ ಸ್ಟೋರಿ ಅರಿಯಲೇಬೇಕು! ಮನೆ ಖಾಲಿ ಇದೆಯಾ ಅಂತ ಕೇಳಲು ಬಂದಿದ್ದ ಖದೀಮರು ಮಹಿಳೆಯ ಚಿನ್ನದ ಸರ ಎಗರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಿಳೆಯ ಕೂಗಾಟ ಕೇಳಿ ಕಳ್ಳರು ಎಸ್ಕೇಪ್ ಆಗುವಾಗ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೌದು, ಈ ಘಟನೆ ನಡೆದಿದ್ದು ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಪ್ರತಿಷ್ಠಿತ ಸೂರ್ಯನಗರ ಬಡಾವಣೆಯಲ್ಲಿ. ಅದೂ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಐಟಿಬಿಟಿ ನೌಕರರು ವಾಸಿಸುತ್ತಿರುವ ಬಡಾವಣೆಯಲ್ಲೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರಿಗೆ ಭೀತಿಯುಂಟು ಮಾಡಿದೆ.
ಮನೆ ಮಾಲೀಕರು ʼಮನೆ ಖಾಲಿ ಇದೆʼ ಅಂತ ಬೋರ್ಡ್ ಹಾಕಿದ್ರು. ಇದು ಖದೀಮರ ಕಣ್ಣಿಗೆ ಬಿದ್ದಿದೆ. ಬಳಿಕ ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಬಂದ ಇಬ್ಬರು ಚಾಕು ತೋರಿಸಿ ಮಹಿಳೆಯ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಮಹಿಳೆ ಪ್ರತಿರೋಧ ತೋರಿ ಕಿರುಚುತ್ತಿದ್ದಂತೆಯೇ ಮಹಿಳೆಯ ಕುತ್ತಿಗೆ, ಕೈಗೆ ಚಾಕುವಿನಿಂದ ಚುಚ್ಚಿದ್ದಾರೆ. ನಂತರ ಸಾರ್ವಜನಿಕರು ಕಳ್ಳರನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೂರ್ಯಸಿಟಿ ಬಡಾವಣೆಗೆ ನುಗ್ಗಿದ ಈ ಖತರ್ನಾಕ್ ಗಳು ಮೂಲತಃ ವೇಲೂರು ಮೂಲದವರು. ಒಬ್ಬ ಸುರೇಶ, ಮತ್ತೊಬ್ಬ ಕೃಷ್ಣ. ಈ ಇಬ್ಬರು ಮೊದಲು ಸಿಸಿ ಟಿವಿ ಇರದ ಜಾಗ ಆಯ್ಕೆ ಮಾಡಿದ್ದಾರೆ. ಅಲ್ಲದೆ, ಮಹಿಳೆ ಒಬ್ಬಂಟಿ ಇರೋದಾಗಿ ಊಹಿಸಿ ಮನೆಯೊಳಗೆ ಹೋಗಿದ್ದಾರೆ.
ಆದರೆ, ವರ್ಕ್ ಫ್ರಮ್ ಹೋಮ್ ಇರೋ ಕಾರಣ ಮಹಿಳೆ ಉಷಾರ ಪತಿ ಮನೆಯಲ್ಲಿ ಇರೋದನ್ನು ಕಂಡು ಬೇಗ ಸರ ಕಿತ್ತುಕೊಳ್ಳಲು ಯತ್ನಿಸಿ ಚಾಕು ಚುಚ್ಚಿದ್ದಾರೆ. ಪತ್ನಿಯ ಕೂಗು ಕೇಳಿ ಹೊರ ಬಂದ ಪತಿ ಹಾಗೂ ಕಳ್ಳರ ಮಧ್ಯೆ ಘರ್ಷಣೆ ಆಗಿ ಕಳ್ಳರು ಓಡಿಹೋಗಲು ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು, ಕಳ್ಳರನ್ನು ಬೆನ್ನಟ್ಟಿ ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಪೆಟ್ಟು ತಿಂದ ಕಳ್ಳರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದು ಗಂಟೆಗಳೇ ಕಳೆದ್ರೂ ಸೂರ್ಯ ಸಿಟಿ ಪೊಲೀಸರು ಸ್ಥಳಕ್ಕೆ ಬಾರದೇ ಇರೋದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
- ಹರೀಶ್ ಗೌತಮನಂದ, ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
PublicNext
27/04/2022 10:56 pm