ಬೆಂಗಳೂರು: ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ಪ್ರಯಾಣಿಕರ ಹಾಗೂ ಕ್ಯಾಬ್ ಚಾಲಕನ ನಡುವೆ ಗಲಾಟೆ ನಡೆದಿದ್ದು, ಈ ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಚಾಲಕನಿಗೆ ಇರಿದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಹೊಸೂರು ರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ಇಂದು ಬೆಳಗ್ಗೆ ಹಾಸನ ಮೂಲದ ಚಾಲಕ ದಿಲೀಪ್, ಪ್ರಯಾಣಿಕರಿಂದ ಚಾಕು ಇರಿತಕ್ಕೊಳಗಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಜಾವ 3ರ ವೇಳೆಗೆ ಬೊಮ್ಮಸಂದ್ರದಿಂದ ಮಡಿವಾಳದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕ್ಯಾಬ್ ನಲ್ಲಿ ಬಂದಿದ್ದಾರೆ.
ಈ ವೇಳೆ ಚಾಲಕ ದಿಲೀಪ್ ಹಾಗೂ ಪ್ರಯಾಣಿಕರ ನಡುವೆ ಬಾಡಿಗೆ ಹಣ ವಿಚಾರಕ್ಕಾಗಿ ಮಾತಿನ ಚಕಮಕಿ ನಡೆದಿದೆ. ನೋಡ ನೋಡುತ್ತಿದ್ದಂತೆಯೇ ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಮೂವರು ಪ್ರಯಾಣಿಕರು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಿರುವ ಪೊಲೀಸರು ಸಿಸಿ ಟಿವಿ ಆಧಾರದಲ್ಲಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ಏರಿಯಾದಲ್ಲಿ ಕಳ್ಳತನ, ಸುಲಿಗೆ ಸಹಿತ ನಾನಾ ಅಪರಾಧಗಳು ನಡೆಯುತ್ತಿದೆ. ರಾತ್ರಿ ಹೊತ್ತು ವಿಳಾಸ ಕೇಳುವ ಹಾಗೂ ಪ್ರಯಾಣಿಕರ ಸೋಗಿನಲ್ಲಿ ಸುಲಿಗೆ ಹೆಚ್ಚಾಗಿದ್ದು, ಪೊಲೀಸರು ಈ ಕುಕೃತ್ಯಗಳನ್ನೆಲ್ಲ ತಡೆಯಬೇಕಿದೆ ಎನ್ನುತ್ತಾರೆ ಕ್ಯಾಬ್ ಚಾಲಕ ಸಂತೋಷ್.
PublicNext
17/04/2022 08:39 pm