ಬೆಂಗಳೂರು: ನಶೆ ಏರಿಸೋ ಪಡ್ಡೆ ಹುಡುಗರಿಗೆ ಈ ಮಾದಕ ವಸ್ತು ಹಾಟ್ ಫೇವರೇಟ್. ಮಾರುಕಟ್ಟೆಯಲ್ಲಿ ಚಿನ್ನವನ್ನೇ ಮೀರಿಸೋ ಇದು 6 ವರ್ಷದಿಂದ ನಾಪತ್ತೆಯಾಗಿತ್ತು. ಆದ್ರೆ, ಈಗ ಮತ್ತೆ ಸಿಲಿಕಾನ್ ಸಿಟಿಗೆ ಡ್ರಗ್ ಎಂಟ್ರಿ ಕೊಟ್ಟಿದ್ದು, ಐಸ್ ಜಾಲದ ಕಿಂಗ್ ಪಿನ್ ಗಳನ್ನು ಪೊಲೀಸರು ಖೆಡ್ಡಕ್ಕೆ ಕೆಡವಿದ್ದಾರೆ.
ಕಲ್ಲುಸಕ್ಕರೆಯಂತಿರೋ ಈ ವಸ್ತುವಿಗೆ ಕಾಳಸಂತೆಯಲ್ಲಿ ಎಲ್ಲಿಲ್ಲದ ಡಿಮ್ಯಾಂಡ್. ಒಂದು ಗ್ರಾಂ ಬೆಲೆ 5 ಸಾವಿರವಾಗಿದ್ದು, ಗೋವಿಂದಪುರ ಪೊಲೀಸರ ಕಾರ್ಯಾಚರಣೆ ವೇಳೆ 35 ಕೋಟಿ ಮೌಲ್ಯದ 70 ಕೆ.ಜಿ.ಗೂ ಅಧಿಕ ಡ್ರಗ್ಸ್ ಪತ್ತೆಯಾಗಿದೆ.
ಈ ಡ್ರಗ್ ನ ಅಸಲಿ ಹೆಸರು ಮೆಥಕ್ವಾಲೋನ್. ಯುಕೆ, ಅಮೆರಿಕ, ಸೌತ್ ಆಫ್ರಿಕಾದಲ್ಲಿ ಹೆಚ್ಚು ಬಳಕೆಯಲ್ಲಿದೆ. ಬೆಂಗಳೂರಿನಲ್ಲೂ ಭಾರಿ ಡಿಮ್ಯಾಂಡ್. ಈ ಡ್ರಗ್ ಗೆ ಬೆಂಗಳೂರಿನ ಕೆಲ ಸೆಲೆಬ್ರಿಟಿಗಳು, ಉದ್ಯಮಿಗಳ ಪುತ್ರರೇ ಕಸ್ಟಮರ್ಸ್!
ಈ ಬಗ್ಗೆ ಖಚಿತ ಮಾಹಿತಿ ಪಡೆದ ಗೋವಿಂದಪುರ ಪೊಲೀಸರು ಮಾರಾಟ ವೇಳೆ ಓರ್ವನ ಖೆಡ್ಡಕ್ಕೆ ಕೆಡವಿದ್ರು. ಆತ ನೀಡಿದ ಸುಳಿವಿನಂತೆ ತಮಿಳುನಾಡಿಗೆ ತೆರಳಿದ ತಂಡ ಚೆನ್ನೈನ ಗೋಡೌನ್ ಗೆ ದಾಳಿ ನಡೆಸಿತ್ತು. ಈ ವೇಳೆ ಮೆಥಕ್ವಾಲೋನ್ ಅಪಾರ ಪ್ರಮಾಣದಲ್ಲಿ ಪತ್ತೆಯಾಗಿದೆ.
ಇದರ ಒಟ್ಟು ಮೌಲ್ಯ 35 ಕೋಟಿ ಎನ್ನಲಾಗಿದೆ. ಅಲ್ಲದೆ, 6.5 ಕೆಜಿ ಎಂಡಿಎ, 75 ಗ್ರಾಂ ಕೊಕೇನ್, 300 ಗ್ರಾಂ ಟ್ರೊಮೊಡೊಲ್ ಸಹ ವಶ ಪಡಿಸಿ, ಕಿಂಗ್ ಪಿನ್ ಗಳಾದ ರಂಜಿತ್ ಬಾನ್ ಗುಪ್ತಾ, ಅಂಡ್ರೆಸ್ ಪಿಲಿಪೊ, ಗೋಡೌನ್ ಮಾಲೀಕ ರಾಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಗಾಂಜಾ ಘಾಟು ಕೂಡ ಹೆಚ್ಚಾಗಿದ್ದು, ಪೊಲೀಸರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒರಿಸ್ಸಾ ಮೂಲದ ದೊಡ್ಡ ಜಾಲ ಪತ್ತೆಯಾಗಿದೆ. ಹೊರ ರಾಜ್ಯದಿಂದ ಗಾಂಜಾ ತಂದು ಮಾರುತ್ತಿದ್ದ ಸಮರಕರ, ರಮೇಶ್, ಮಂಗೋಲ್ ಸಿಸಾ ಎಂಬವರನ್ನು ಬಂಧಿಸಿ, 300 ಕೆಜಿಯಷ್ಟು ಗಾಂಜಾ ವಶ ಪಡಿಸಲಾಗಿದೆ.
- ಶ್ರೀನಿವಾಸ್ ಚಂದ್ರ ,ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
08/04/2022 11:06 pm