ಯಲಹಂಕ : ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಆತನ ಧ್ವನಿಯನ್ನೇ ಅಡಗಿಸಿದ ಘಟನೆ ಬೆಂಗಳೂರು ಈಶಾನ್ಯ ವಿಭಾಗದ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿಳೆಶಿವಾಲೆಯ ಹನುಮಂತನಗರದಲ್ಲಿ ನಡೆದಿದೆ. ಹೊಸ ವರ್ಷಾಚರಣೆ ದಿನ ಬಿಳೆಶಿವಾಲೆ ಪೂರ್ವಂಕರ ಅಪಾರ್ಟ್ಮೆಂಟ್ ನ ಲೆಬರ್ ಶೆಡ್ ಬಳಿ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆ ಮುರುಗನ್ (31) ಜೋರಾಗಿ ಗಲಾಟೆ ಮಾಡಬೇಡಿ ಎಂದು ಪಕ್ಕದ ಶೆಡ್ ಕಾರ್ಮಿಕರಿಗೆ ಬುದ್ದಿ ಹೇಳಿದ್ದಾನೆ. ಇದರಿಂದ ಕುಪಿತರಾದ ಆಂಟೋನಿ ಸಿಂಗ್, ಕಿಶನ್ ಎಕ್ಕ, ರಂಜನ್ ಟಿರ್ಕಿ ಇನ್ನು ಮೂರು ಜನ ಸೇರಿ ಮುರುಗನ್ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದರು.
ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುರುಗನ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಲೆಯತ್ನದ ವಿರುದ್ಧ ಮುರುಗನ್ ಪತ್ನಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಇನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮುರುಗನ್ ಗೆ ಚಿಕಿತ್ಸೆ ಮುಂದುವರೆದಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಮುರುಗನ್ ಸಾವನ್ನಪ್ಪಿದ್ದಾನೆ.
ಪ್ರಕರಣ ಬೆನ್ನತ್ತಿದ್ದ ಕೊತ್ತನೂರು ಪೊಲೀಸರು ಆಂಟೋನಿ ಸಿಂಗ್, ಕಿಶನ್ ಎಕ್ಕಾ ಮತ್ತು ರಂಜನ್ ಟಿರ್ಕಿಯನ್ನು ಬಂಧಿಸಿದ್ದಾರೆ. ಉಳಿದ ಮೂರು ಜನ ಕೊಲೆ ಆರೋಪಿಗಳಿಗಾಗಿ ಶೋಧಾಕಾರ್ಯ ಮುಂದುವರೆಸಿದ್ದಾರೆ.ಒಟ್ಟಾರೆಯಲ್ಲಿ ಬುದ್ದಿ ಹೇಳಿದ ತಪ್ಪಿಗೆ ಮುರುಗನ್ ಬೀದಿ ಹೆಣವಾಗಿದ್ದು ಮಾತ್ರ ವಿಪರ್ಯಾಸ.
Kshetra Samachara
23/01/2022 03:30 pm