ಬೆಂಗಳೂರು: ʼಆನ್ ಲೈನ್ʼ ಹೆಸ್ರಲ್ಲಿ ಕೋಟಿ ಕೋಟಿ ವಂಚಿಸಿದ್ದ ಆರೋಪಿಯನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪವರ್ ಬ್ಯಾಂಕ್ ಹಾಗೂ ಸನ್ ಫ್ಯಾಕ್ಟರಿ ಹೆಸರಿನ ಆನ್ ಲೈನ್ ಮೊಬೈಲ್ ಅಪ್ಲಿಕೇಷನ್ ಮೂಲಕ ದೇಶದೆಲ್ಲೆಡೆ ಕೋಟ್ಯಂತರ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಆರೋಪದಡಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯನ್ನು ವಿಚಾರಣೆ ನಡೆಸಿದಾಗ 84 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಕೇರಳ ಮೂಲದ ಅನಸ್ ಅಹಮ್ಮದ್ ಬಂಧಿತ.
ವಂಚನೆ ಪ್ರಕರಣದಲ್ಲಿ ಈತನನ್ನು ನವೆಂಬರ್ ನಲ್ಲಿ ಸಿಐಡಿ ಬಂಧಿಸಿತ್ತು. ಈತನ ಪತ್ನಿ ಚೀನಾದ ಹೂ ಕ್ಸಿಯೊಲಿನ್ ಳನ್ನೂ ವಶಕ್ಕೆ ಪಡೆಯಲಾಗಿತ್ತು. ದಿನ- ವಾರ ಲೆಕ್ಕದಲ್ಲಿ ಹಣ ಹೂಡಿಕೆ ಮಾಡಿದರೆ ಬಡ್ಡಿ ಸಹಿತ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ, ಸಾವಿರಾರು ಜನರಿಂದ 84 ಕೋಟಿ ರೂ. ಹೂಡಿಕೆ ಮಾಡಿಸಿ ವಂಚಿಸಿದ್ದ. ಅನಸ್, ಚೀನಾದ ಹವಾಲಾ ದಂಧೆಕೋರರ ಸಂಪರ್ಕದಲ್ಲಿದ್ದು, ಅಕ್ರಮ ಹಣ ವರ್ಗಾವಣೆಗೆ ಬುಲ್‌ಫಿನ್ಚ್ ಸಾಫ್ಟ್‌ವೇರ್, ಎಚ್ ಆ್ಯಂಡ್ ಎಸ್ ವೆಂಚರ್ಸ್, ಕ್ಲಿಪ್ಪೊರ್ಡ್ ವೆಂಚರ್ಸ್, ಬಯೋಸಾಫ್ಟ್ ವೆಂಚರ್ಸ್ ಕಂಪನಿ ತೆರೆದಿದ್ದ.
ರೇಜರ್ ಪೇ ಸಾಫ್ಟ್ ವೇರ್ ಕಂಪೆನಿ ದೂರು ನೀಡಿದ ಮೇರೆಗೆ ಚೀನಾ, ಟಿಬೆಟಿಯನ್ ಪ್ರಜೆ ಸಹಿತ 11 ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ರು. ದೇಶದ ಹಲವೆಡೆ ಈತನ ವಿರುದ್ಧ ನೂರಾರು ಪ್ರಕರಣ ದಾಖಲಾಗಿದ್ದು, ಸದ್ಯ 20 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣ ವಿದೇಶಿ ಪ್ರಜೆಗಳು ಮತ್ತು ಕಂಪೆನಿಗಳನ್ನು ಒಳಗೊಂಡಿರುವುದರಿಂದ ಸಿಬಿಐ, ಐಬಿ, ಇ.ಡಿ. ತನಿಖೆ ನಡೆಸುತ್ತಿದೆ.
PublicNext
21/01/2022 12:58 pm