ಆನೇಕಲ್: ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸೇರಿದಂತೆ ಮತ್ತೊಬ್ಬ ಮಹಿಳೆ ಭೀಕರವಾಗಿ ಕೊಲೆಯಾಗಿರು ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿ ನಡೆದಿದೆ.
ಚಂದಾಪುರ ಗ್ರಾಮದ ರಾಮಯ್ಯ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಕೊಲೆಯಾದವರು ಚಿಕ್ಕ ಹಾಗಡೆ ಗ್ರಾಮದ ನಾರಾಯಣ ಸ್ವಾಮಿ ಹಾಗೂ ಚಂದಾಪುರ ಗ್ರಾಮದ ಕಾವ್ಯ ಎಂದು ಗುರುತಿಸಲಾಗಿದೆ. ನಾರಾಯಣ ಸ್ವಾಮಿ ಹಾಗೂ ಕಾವ್ಯ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ನಾರಾಯಣ ಸ್ವಾಮಿ ಶನಿವಾರ ಸಂಜೆ ಕಾವ್ಯ ಅವರ ಮನೆಗೆ ಬಂದಿದ್ದ. ಈ ವೇಳೆ ಕಾವ್ಯ ತಾಯಿ ಅಂಗಡಿಗೆಂದು ಹೊರಹೋಗಿದ್ದರು. ಇದೇ ಸಮಯದಲ್ಲಿ ಆಟೋದಲ್ಲಿ ಬಂದಂತಹ ಮೂರಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ನಾರಾಯಣ ಸ್ವಾಮಿ ಹಾಗೂ ಕಾವ್ಯರನ್ನು ಕೊಲೆಗೈದು ಪರಾರಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಕಾವ್ಯ ತಾಯಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‌ಪಿ ಲಕ್ಷ್ಮಿ ಗಣೇಶ್, ಡಿವೈಎಸ್‌ಪಿ ಎಂ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಸೂರ್ಯ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾವ್ಯ ಪತಿಯ ಮೇಲೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಆತನಿಗೆ ಬಲೆ ಬೀಸಿದ್ದಾರೆ.
Kshetra Samachara
12/12/2021 10:56 am