ಗಣೇಶೋತ್ಸವ ವಿಚಾರಕ್ಕೆ ಚಾಮರಾಜಪೇಟೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗಲೇ ಇಲ್ಲಿನ ಆಜಾದ್ ನಗರದಲ್ಲಿ ಐವರು ಸಿನಿಮಾ ಸ್ಟೈಲ್ನಲ್ಲಿ ಗಣೇಶನ ಮೂರ್ತಿಗಳನ್ನು ಕಳವು ಮಾಡಲು ಯತ್ನಿಸಿ ಆತಂಕ ಸೃಷ್ಟಿಗೆ ಕಾರಣರಾಗಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಪ್ರೇಮಾ ಅಭಿನಯದ ಕನಸುಗಾರ ಸಿನಿಮಾ ನೋಡಿದ್ರೆ ನಿಮಗೆ ಅದರಲ್ಲಿ ಗಣೇಶನ ಮೂರ್ತಿ ಕಳವು ಮಾಡುವ ದೃಶ್ಯ ಕಂಡು ಬರುತ್ತೆ. ಈ ಸಿನಿಮಾದಲ್ಲಿ ಕಳ್ಳತನ ಮಾಡಿದ ಗಣಪತಿಯ ಮೂರ್ತಿಯನ್ನ ನಾಯಕಿಯ ಹೊಸ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತೆ. ಇದೇ ರೀತಿಯ ಘಟನೆಯೊಂದು ನಗರದ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಬೈಕ್ಗಳಲ್ಲಿ ಬರುವ ಐವರು ಆಜಾದ್ ನಗರದಲ್ಲಿರುವ ಗಣೇಶ ಮೂರ್ತಿ ಇಟ್ಟಿದ್ದ ಗೋದಾಮಿಗೆ ನುಗ್ಗಿ ಗಣೇಶ ಮೂರ್ತಿಗಳನ್ನ ಕದಿಯೋಕೆ ಅಂತ ಬಂದಿದ್ದರು. ಮೂರ್ತಿ ಕದ್ದೊಯ್ಯುವ ವೇಳೆ ಅವಾಂತರವೊಂದು ನಡೆದಿದ್ದು, ಈ ಘಟನೆ ಪೊಲೀಸ್ರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
ಮುನಿರಾಜು ಎಂಬುವರಿಗೆ ಸೇರಿದ ಗಣೇಶ ಮೂರ್ತಿ ಗೋಡೌನ್‌ಗೆ ನುಗ್ಗಿದ್ದ ಐವರು ಖದೀಮರು ಗಣೇಶ ಮೂರ್ತಿಗಳನ್ನ ಕದಿಯೋಕೆ ಅಂತ ಬಂದಿದ್ದರು. 2 ಬೈಕ್ಗಳಲ್ಲಿ ಬಂದಿದ್ದ ಐವರು, ಮೊದಲು 4 ಅಡಿಯ ಒಂದು ಮೂರ್ತಿಯನ್ನ ಕಳವು ಮಾಡಲು ಯತ್ನಿಸಿದ್ದಾರೆ. ಆಗ ಮೂರ್ತಿ ವಿಘ್ನಗೊಂಡಿದೆ. ಅದನ್ನು ಅಲ್ಲೇ ಬಿಟ್ಟು ಮತ್ತೊಂದು 4 ಅಡಿಯ ಮೂರ್ತಿಯನ್ನ ಒಂದು ಬೈಕ್ ಮೇಲೆ ಇಟ್ಟುಕೊಂಡು ಪರಾರಿಯಾಗಲು ಯತ್ನಿಸುತ್ತಾರೆ. ಗೋಡೌನ್ ಬಳಿಯಿಂದ ಹೊರಟು ಕೇವಲ 70 ಮೀಟರ್ ದಾಟುವಷ್ಟರಲ್ಲಿ ಮೂರ್ತಿ ಕೆಳಗೆ ಬಿದ್ದು ಚೂರು ಚೂರಾಗಿದೆ. ಒಡೆದ ಮೂರ್ತಿಯನ್ನ ಅಲ್ಲೇ ಬಿಟ್ಟ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಇನ್ನೂ ಬೆಳಗ್ಗೆ ಯಾರೋ ಗಣಪತಿ ವಿಗ್ರಹಗಳನ್ನ ವಿಘ್ನಗೊಳಿಸಿದ್ದಾರೆ ಅಂತ ಸ್ಥಳೀಯರು ಪೊಲೀಸ್ರಿಗೆ ಮಾಹಿತಿ ಮುಟ್ಟಿಸಿದ್ರು. ಕೂಡಲೇ ಕಾರ್ಯಪ್ರವೃತ್ತರಾದ ಚಾಮರಾಜಪೇಟೆ ಪೊಲೀಸ್ರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು.
ಇನ್ನು ಮೊದಲೇ ಚಾಮರಾಜಪೇಟೆಯ ಮೈದಾನದ ವಿವಾದ ತಣ್ಣಗಾಗಿಲ್ಲ. ನಿನ್ನೆಯಷ್ಟೆ ನಿರ್ವಿಘ್ನವಾಗಿ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸ್ರಿಗೆ ಗಣಪನ ಮೂರ್ತಿ ಕಳವು ಹಾಗೂ ವಿಘ್ನದ ವಿಚಾರ ತಿಳಿದು ಬೆಸ್ತು ಬಿದ್ದಿದ್ರು. ಕೂಡಲೇ ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಮೂರ್ತಿ ಕದಿಯಲು ಬಂದಾಗ ಇಂತಹ ಅನಾಹುತ ಆಗಿದೆ ಅಂತ ಪೊಲೀಸ್ರು ನಿಟ್ಟುಸಿರು ಬಿಟ್ಟಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
01/09/2022 08:41 pm