ದೊಡ್ಡಬಳ್ಳಾಪುರ: ತಾಲೂಕಿನ ಹಿರೇಮುದ್ದೇನಹಳ್ಳಿ-ಕಲ್ಲುಕೋಟೆ ಅರಣ್ಯಪ್ರದೇಶದ ಅಂಚಿನಲ್ಲಿ ಚಿರತೆ ದಾಳಿಯಿಂದ 10 ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಸತ್ತ ಕುರಿಯನ್ನ ತಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆಯ ಎಚ್ಚರಿಕೆಯನ್ನ ಗ್ರಾಮಸ್ಥರು ನೀಡಿದ್ದರು. ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿದ ತಹಶೀಲ್ದಾರ್ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ತಾಲೂಕಿನ ಹಿರೇಮುದ್ದೇನಹಳ್ಳಿ-ಕಲ್ಲುಕೋಟೆ ಅರಣ್ಯಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಿಗೆ ಚಿರತೆ ಆತಂಕ ಹುಟ್ಟಿಸಿದೆ. ಇದರ ದಾಳಿಗೆ 10 ಕ್ಕೂ ಜಾನುವಾರುಗಳು ಬಲಿಯಾಗಿದ್ದು ಗ್ರಾಮಸ್ಥರು ಮನೆಯಿಂದ ಹೊರ ಬರುವುದಕ್ಕೂ ಹೆದರುತ್ತಿದ್ದಾರೆ. ಚಿರತೆ ಹಾವಳಿಯಿಂದ ಕಂಗೆಟ್ಟಿರುವ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅಧಿಕಾರಿಗಳಿಗೆ ಮನವಿ ಸಲಿಸಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗ್ರಾಮ ಸಭೆಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕಳೆದ ಸೋಮವಾರ ಹಿರೇಮುದ್ದೇನಹಳ್ಳಿ ಗ್ರಾಮದ ಚಿಕ್ಕ ನರಸಿಂಹಯ್ಯನವರಿಗೆ ಸೇರಿದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ ಕುರಿಯನ್ನು ಬಲಿ ಪಡೆದಿದೆ. ಇದರಿಂದ ರೈತರ ಮನವಿಗೆ ಸ್ಪಂದಿಸದ ದೊಡ್ಡಬಳ್ಳಾಪುರ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ತಾಲೂಕು ಕಚೇರಿ ಮುಂದೆ ಸತ್ತ ಕುರಿಯನ್ನ ಇಟ್ಟು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
ರೈತರ ಪ್ರತಿಭಟನೆಗೆ ಎಚ್ಚೆತ್ತ ತಹಶೀಲ್ದಾರ್ ಮೋಹನಕುಮಾರಿ ಮತ್ತು ಅಧಿಕಾರಿಗಳ ತಂಡ ,ವಲಯ ಅರಣ್ಯಾಧಿಕಾರಿ ಮುನಿರಾಜು ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಚಿರತೆಯನ್ನು ಸೆರೆಹಿಡಿಯಲು ಹೆಚ್ಚುವರಿ ಬೋನ್ ಅಳವಡಿಸಿ, ತ್ವರಿತವಾಗಿ ಕ್ರಮಕೈಗೊಂಡು ಚಿರತೆ ಉಪಟಳ ತಡೆಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
PublicNext
29/03/2022 07:23 pm