ಬೆಂಗಳೂರು : ತರಕಾರಿ ಕತ್ತರಿಸೋ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಆಂಧ್ರ ಶೈಲಿ ರೆಸ್ಟೋರೆಂಟಿನಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು,ನೇಪಾಳ ಮೂಲದ 25 ವರ್ಷದ ಮಿಲನ್ ಬರಲ್ ಕೊಲೆಯಾದ ದುರ್ಧೈವಿಯಾಗಿದ್ದಾನೆ.
ಕಳೆದ ಕೆಲ ದಿನಗಳಿಂದ ಆಂಧ್ರ ಶೈಲಿ ರೆಸ್ಟೋರೆಂಟಿನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಮಿಲನ್ ತರಕಾರಿ ಕತ್ತರಿಸಲು ಬಳಸುತ್ತಿದ್ದ ಚಾಕುವನ್ನ ಆತನ ಸಹದ್ಯೋಗಿ ಸ್ನೇಹಿತ ಆರ್ಯನ್ ಪುಷ್ಕರ್ ಎಂಬಾತ ತೆಗೆದುಕೊಂಡಿದ್ದ.
ಇದೇ ವಿಚಾರವಾಗಿ ಮಧ್ಯಾಹ್ನ ಇಬ್ಬರ ನಡುವೆ ಗಲಾಟೆ ಶುರುವಾಗಿ ರೆಸ್ಟೋರೆಂಟಿನ ಅಡುಗೆ ಕೋಣೆಯಲ್ಲಿ ಕೈ ಕೈ ಮಿಲಾಯಿಸಿದರು. ಈ ವೇಳೆ ಆರೋಪಿ ಆರ್ಯನ್ ಪುಷ್ಕರ್ ಅದೇ ಚಾಕುವಿನಿಂದ ಮಿಲನ್ ಗೆ ಇರಿದಿದ್ದಾನೆ.
ಪರಿಣಾಮ ತೀವ್ರ ರಕ್ತ ಸ್ರಾವದಿಂದ ಮಿಲನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಆರ್ ಆರ್ ನಗರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದು ಆರೋಪಿ ಆರ್ಯನ್ ಪುಷ್ಕರ್ ನನ್ನ ವಶಕ್ಕೆ ಪಡೆದಿದ್ದಾರೆ.
Kshetra Samachara
30/05/2022 09:19 pm