ಬೆಂಗಳೂರು: ರಕ್ಷಣಾ ಪಡೆಯ ಮಹತ್ವಾಕಾಂಕ್ಷಿ ಯೋಜನೆ ಎಂದು ಹೇಳಲಾಗುತ್ತಿರುವ ಅಗ್ನಿಪಥ್ ಯೋಜನೆಗೆ ಪರ ವಿರೋಧ ಕೂಗು ಕೇಳಿಬಂದಿದೆ. ಕೇಂದ್ರ ಸರ್ಕಾರದ ಕಳೆದ ಎರಡು ದಿನಗಳ ಹಿಂದೆ ಘೋಷಿಸಿದ್ದ ಅಗ್ನಿಪಥ್ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇದು ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದೆ.
ಅಗ್ನಿಪಥ್ ಯೋಜನೆ ಖಂಡಿಸಿರುವ ಪ್ರತಿಭಟನಾಕಾರರು ನಡೆಯುತ್ತಿರುವ ಪ್ರತಿಭಟನೆ ಕೆಲ ರಾಜ್ಯಗಳಲ್ಲಿ ಉಗ್ರ ರೂಪ ಪಡೆಯುತ್ತಿದೆ. ಬಿಹಾರ, ಉತ್ತರಖಂಡ, ಉತ್ತರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಸೋಗಿನಲ್ಲಿ ರೈಲು ತಡೆ, ಕಲ್ಲು ತೂರಾಟಗಳು ನಡೆದಿವೆ. ತೆಲಂಗಾಣದಲ್ಲಿ ಓರ್ವ ಬಲಿಯಾಗಿದ್ದಾನೆ. ದಿಢೀರ್ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ರೈಲ್ವೇ ಪೊಲೀಸರು ತುರ್ತು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ದೇಶನ ನೀಡಿದ್ದಾರೆ.
ಅಗ್ನಿಪಥ್ ಯೋಜನೆ ವಿರೋಧಿಸಿ ವಿವಿಧ ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ರಾಜ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ನೈರುತ್ಯ ರೈಲ್ವೇ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಆರ್‌ಪಿಎಫ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಮತ್ತೊಂದೆಡೆ ಭದ್ರತಾ ವಿಭಾಗದ ರೈಲ್ವೇ ಅಧಿಕಾರಿಗಳು ಆಯಾ ವಿಭಾಗದ ರೈಲ್ವೇ ಪೊಲೀಸರಿಗೆ ಆಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ, ಬೈಯ್ಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ರೈಲು ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್ ರೈಲು ನಿಲ್ದಾಣ, ಕೆಂಗೇರಿ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಮೈಸೂರು ಹಾಗೂ ಬಳ್ಳಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ತಾಕೀತು ಮಾಡಲಾಗಿದೆ. ರೈಲ್ವೇ ನಿಲ್ದಾಣಗಳ ಜೊತೆಗೆ ರೈಲ್ವೆ ಹಳಿಗಳ ಮೇಲೆಯೂ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ರೈಲು ತಡೆ ಸಾಧ್ಯತೆ ಹಿನ್ನೆಲೆಯಲ್ಲಿ ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ.
ಕಾನೂನು ಪ್ರಕಾರ ರೈಲ್ವೇ ನಿಲ್ದಾಣದಲ್ಲಿ ಅಥವಾ ರೈಲ್ವೇ ಹಳಿಗಳ ಮೇಲೆ ಪ್ರತಿಭಟನೆ, ಧರಣಿ, ಅಥವಾ ರೈಲು ತಡೆಗೆ ಮುಂದಾಗುವುದು ನಿಷಿದ್ಧ. ಹೀಗಾಗಿ ಕೆಲ ಪ್ರತಿಭಟನಾಕಾರರು ಪ್ರಯಾಣಿಕರ ವೇಷಧರಿಸಿ ಒಳಬಂದು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಸಿಕಂದರಬಾದ್ ರೈಲಿಗೆ ಬೆಂಕಿ ಇಟ್ಟು ಕಲ್ಲು ತೂರಾಟ ಅವಕಾಶ ಹೆಚ್ಚಿರುವುದರಿಂದ ರೈಲ್ವೇ ನಿಲ್ದಾಣಗಳಲ್ಲಿ ಭದ್ರತಾ ತಪಾಸಣಾ ಹೆಚ್ಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆ ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಆಲರ್ಟ್ ಆಗಿರುವಂತೆ ಸಂಬಂಧ ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ರೈಲ್ವೇ ಎಸ್.ಪಿ ಸಿರಿಗೌರಿ ಮಾಹಿತಿ ನೀಡಿದ್ದಾರೆ.
PublicNext
17/06/2022 03:55 pm