ಬೆಂಗಳೂರು: ಪಿಎಫ್‌ಐ ಕಾರ್ಯಕರ್ತರನ್ನ ಬಂಧಿಸಿದ ಬೆನ್ನಲ್ಲೇ ಪೊಲೀಸರಿಗೆ ಹೊಸ ಟೆನ್ಷನ್ ಶುರುವಾಗಿದೆ. ಆರೋಪಿತರ ಒಂದಷ್ಟು ಕೋಡ್ ವರ್ಡ್‌ಗಳು ಅದನ್ನ ಡಿ ಕೋಡ್ ಮಾಡೋದೆ ಈಗ ಖಾಕಿ ಹರಸಾಹಸವಾಗಿದೆ.
ಒಂದಲ್ಲ ಒಂದು ದಿನ ತಾವು ಮಾಡಿದ ಕೃತ್ಯ ಹೊರ ಬರುತ್ತೆ ಎಂಬುದು ಪ್ರತಿಯೊಬ್ಬ ತಪ್ಪಿತಸ್ಥನಿಗೂ ಗೊತ್ತಿರುವ ವಿಚಾರ. ಅದೇ ರೀತಿ ಕೆ.ಜಿ ಹಳ್ಳಿ ಪ್ರಕರಣಗಳಲ್ಲೂ ನಡೆದಿದೆ. ಈಗಾಗಲೇ 15 ಜನರು ಸಿಕ್ಕಿಬಿದ್ದಿರುವುದು ಗೊತ್ತೇ ಇದೆ. ಅವರನ್ನು ಈಗಾಗಲೇ ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ದಾಳಿ ವೇಳೆ ವಶಕ್ಕೆ ಪಡೆದಿರುವ ವಸ್ತುಗಳಲ್ಲಿ ಕೆಲವೊಂದು ಡೈರಿಗಳೂ ಸಿಕ್ಕಿವೆ. ಆ ಡೈರಿಗಳಲ್ಲಿ ಉಲ್ಲೇಖಿಸಿರುವ ಕೋಡ್ ವರ್ಡ್‌ಗಳು ಈಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಮುಖ ಆರೋಪಿಗಳಾದ ನಾಸೀರ್ ಪಾಷಾ ಹಾಗೂ ಮೊಹಮ್ಮದ್ ಅಶ್ರಫ್ ಇಬ್ಬರನ್ನು ಪೂರ್ವ ವಿಭಾಗ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರು, ಉಳಿದ ಆರೋಪಿಗಳಿಗೆ ದೇಶ ವಿರೋಧಿ ಕೃತ್ಯಗಳಿಗೆ ಬೇಕಾದಂತಹ ಸೂಚನೆಗಳನ್ನ ಹಾಗೂ ಕೆಲವೊಂದು ಪ್ರಚೋದನಾಕಾರಿ ಅಂಶಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಿದ್ರಂತೆ. ಅಷ್ಟೇ ಅಲ್ಲದೆ ಇವರಿಬ್ಬರ ಅಕೌಂಟ್‌ಗೆ ವಿದೇಶಿ ಫಂಡಿಂಗ್ ಆಗಿರುವುದರ ಬಗ್ಗೆ ಕೂಡ ಬ್ಯಾಂಕ್ ರೆಕಾರ್ಡ್ ಮೂಲಕ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಇನ್ನು ಕೆಲ ಆರೋಪಿಗಳ ಬಳಿ ಡೈರಿಗಳು ಸಿಕ್ಕಿದ್ದು ಆ ಡೈರಿಯಲ್ಲಿ ಕೋಡ್ ವರ್ಡ್ ರೀತಿಯಲ್ಲಿ ಒಂದಷ್ಟು ಪದಗಳನ್ನು ಬರೆದಿದ್ದಾರೆ. ಅದರಲ್ಲಿ training to be organized ಎಂಬ ಪದವೇ ಸ್ವಲ್ಪ ಮಟ್ಟಿಗೆ ಆತಂಕ ಹುಟ್ಟಿಸುವಂತದ್ದು, ಈ ಪದ ಯಾವ ಅರ್ಥದಲ್ಲಿ ಬರೆಯಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇನ್ನು ಭಯೋತ್ಪಾದಕ ಕೃತ್ಯದ್ದಾ ಟ್ರೈನಿಂಗಾ? ಕೋಮುಗಲಭೆಗೆ ಸೃಷ್ಟಿಗಾ ಅಥವಾ ಸ್ಫೋಟಕ ತಯಾರಿಕೆ ಮಾಡಲು ತರಬೇತಿಯಾ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕಿದೆ. ಇನ್ನು ಈ ಹದಿನೈದು ಜನರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗ್ತಿದೆ.
Kshetra Samachara
25/09/2022 02:19 pm