ಬೆಂಗಳೂರು: ನಗರದ ರಿಚ್ಮಂಡ್ ಟೌನ್ ನ ನಂಜಪ್ಪ ಸರ್ಕಲ್ ಬಳಿಯ ಶಾಂತಾರಾಮ್ ಕಾಂಪ್ಲೆಕ್ಸ್ ನಲ್ಲಿದ್ದ ಫ್ಯಾಮಿಲಿ ಸೂಪರ್ ಮಾರ್ಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ತಡ ರಾತ್ರಿ ಬೆಂಕಿ ಸಂಭವಿಸಿದ್ರಿಂದ ಭಾರೀ ಅನಾಹುತ ತಪ್ಪಿದೆ. ಆದ್ರೆ ವುಡ್ ವರ್ಕ್, ಬುಕ್ಸ್ ಸಂಗ್ರಹಣೆ ಹೆಚ್ಚಾಗಿ ಇದ್ದಿದ್ರಿಂದ ಬೆಂಕಿ ಶೀಘ್ರವಾಗಿ ವ್ಯಾಪಿಸಿ ಸಂಪೂರ್ಣ ಸೂಪರ್ ಮಾರ್ಕೆಟ್ ಅಗ್ನಿಗಾಹುತಿಯಾಗಿದೆ. ಒಂದೇ ರಾತ್ರಿಯಲ್ಲಿ 4 ಕೋಟಿ ನಷ್ಟವಾಗಿದ್ದು, ಹತ್ತಾರು ನೌಕರರ ಬದುಕು ಬೀದಿಗೆ ಬಿದ್ದಿದೆ. ಈ ಶಾಪಿಂಗ್ ಮಾರ್ಟ್ ಅನ್ವರ್ ಎಂಬುವವರ ಮಾಲಿಕತ್ವದಲ್ಲಿತ್ತು.
ರಾತ್ರಿ 1:30ರ ಸುಮಾರಿಗೆ ಕಾಂಪ್ಲೆಕ್ಸ್ ನ ಒಂದು ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಘಟನೆ ಆರಂಭದಲ್ಲೇ ಅಗ್ನಿಶಾಮಕ ದಳದ ವಾಹನವೊಂದು ಸ್ಥಳಕ್ಕೆ ಬಂದಿದೆ.ಬಳಿಕ ಬೆಂಕಿಯ ಕೆನ್ನಾಲಿಗೆ ಕಂಡು ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗಿದೆ. ಉಳಿದ ವಾಹನಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಇಡೀ ಕಾಂಪ್ಲೆಕ್ಸ್ ಅಗ್ನಿಗಾಹುತಿಯಾಗಿದೆ. ಶಾಪಿಂಗ್ ಮಾರ್ಟ್ ನಲ್ಲಿದ್ದ 4 ಲಕ್ಷ ನಗದು 3 ಕೋಟಿಯಷ್ಟು ವಸ್ತುಗಳು 1 ಕೋಟಿ ಮೌಲ್ಯದ ಪೀಠೋಪಕರಣ ಸಂಪೂರ್ಣ ಸುಟ್ಟು ಭಸ್ಮವಾಗಿದೆ. 9 ಅಗ್ನಿಶಾಮಕ ವಾಹನಗಳಿಂದ ಬೆಳಗ್ಗಿನ ಜಾವದವರೆಗೂ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
PublicNext
07/09/2022 01:21 pm