ನೆಲಮಂಗಲ: ಆ ಯುವಕ ಬಣ್ಣದ ಲೋಕದ ಚಿತ್ತಾರದಲ್ಲಿ ಕಲೆಗಾರನಾಗಿ ಬದುಕು ಕಟ್ಟಿಕೊಳ್ತಿದ್ದ. ಸಹೋದರಿ ಸಹ ಖಾಸಗಿ ಕಾಲೇಜೊಂದ್ರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡ್ತಾ ಲೆಕ್ಕಾಚಾರದಲ್ಲಿ ಬದುಕು ನಡೆಸ್ತಿದ್ರು. ಆಕೆ ತನ್ನ ಮಗಳನ್ನು ಕಾಲೇಜಿಗೆ ಸೇರಿಸಲು ಹೋಗಿದ್ದವರು ಜವರಾಯನ ಅಟ್ಟಹಾಸಕ್ಕೆ ಮಸಣ ಸೇರಿದ್ರು!
ಹೌದು, ಈ ಫೋಟೊದಲ್ಲಿ ಕಾಣ್ತಿರೋ ಈಕೆ ಶಶಿಕಲಾ (35 ವರ್ಷ), ಸಹೋದರ ರಂಜನ್ (27 ವರ್ಷ). ಇವರಿಬ್ರು ಶಶಿಕಲಾ ಮಗಳನ್ನು ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ದಾಖಲಾತಿ ಮಾಡಿಸಿ ಬೆಂಗಳೂರಿಗೆ ವಾಪಸ್ ಬರುವ ವೇಳೆ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ಅಸು ನೀಗಿದ್ದಾರೆ!
ಇನ್ನು, ರಾ.ಹೆ. 75ರಲ್ಲಿ ಬರುವಾಗ ರಸ್ತೆಬದಿ ನಿಂತಿದ್ದ ಕಂಟೇನರ್ ಲಾರಿಗೆ ಅಕ್ಕ-ತಮ್ಮ ಪ್ರಯಾಣಿಸ್ತಿದ್ದ ಕ್ವಾಲಿಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ವಾಹನ ನಜ್ಜುಗುಜ್ಜಾಗಿ ರಂಜನ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಶಶಿಕಲಾ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇತ್ತ ಕಾರು ಚಲಾಯಿಸುತ್ತಿದ್ದ ಶಶಿಕಲಾ ಪತಿ ಸತ್ಯಮೂರ್ತಿ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡ್ತಿದ್ದಾರೆ.
ಶಶಿಕಲಾ ಮೂಲತಃ ಮಂಡ್ಯದವರಾಗಿದ್ದು, ಬೆಂಗಳೂರಿನ ಪ್ರಕಾಶ್ ನಗರದಲ್ಲಿ ಸಾಂಸಾರಿಕ ಜೀವನ ನಡೆಸುತ್ತಿದ್ದರು. ಜೊತೆಯಲ್ಲಿ ತಮ್ಮ ರಂಜನ್ ಸಹ ವಾಸವಿದ್ದ. ಶಶಿಕಲಾ ಖಾಸಗಿ ಕಾಲೇಜಿನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ರೆ, ರಂಜನ್ ಪೈಂಟಿಂಗ್ ಆರ್ಟಿಸ್ಟ್ ಆಗಿ ಬಣ್ಣದ ಬದುಕಿನಲ್ಲಿ ಜೀವನ ಕಟ್ಟಿ ಕೊಳ್ಳೋಕೆ ಮುಂದಾಗಿದ್ದ. ನೆಲಮಂಗಲ ಸಂಚಾರಿ ಪೊಲೀಸ್ರು ಪ್ರಕರಣ ದಾಖಲಿಸಿದ್ದು, ಕಂಟೇನರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
PublicNext
24/06/2022 10:23 pm