ಬೆಂಗಳೂರು: ಬೆಳಿಗ್ಗೆ ಮುದ್ದಾದ ಮಗುವನ್ನು ಮುದ್ದಾಡಿ ಟಾಟಾ ಮಾಡಿ, ಸಂಜೆ ಬರ್ತೀನಿ ಕಂದಾ... ಅಂತ ಹೊರಟಿದ್ದ ತಾಯಿ ಯಮರೂಪಿ ಕಸದ ಲಾರಿಗೆ ಬಲಿಯಾಗಿ ನೇರವಾಗಿ ಮಸಣ ಸೇರಿದ್ಳು. ಇತ್ತ 3 ವರ್ಷ ಇರುವಾಗಲೇ ತಂದೆಯನ್ನು ಕಳೆದುಕೊಂಡಿದ್ದ ಈ ಕಂದ ಈಗ ತಾಯಿಯನ್ನೂ ಕಳೆದುಕೊಂಡು ಅನಾಥವಾಗಿದೆ!
ನಿನ್ನೆ ರಾತ್ರಿ ಕಸದ ಲಾರಿಗೆ ಸಿಲುಕಿ ಮೃತರಾದ ಪದ್ಮಿನಿ ಅವರ ಸಾವು 5 ವರ್ಷದ ಪುಟಾಣಿಯನ್ನು ಅನಾಥವಾಗಿಸಿದೆ. ದುರಂತ ಅಂದ್ರೆ 3 ವರ್ಷಗಳ ಹಿಂದೆ ಆರ್ಕಿಟೆಕ್ ಆಗಿದ್ದ ಪದ್ಮಿನಿ ಪತಿ ಕೆಲಸ ಮಾಡುವ ಕಡೆ ತಲೆಗೆ ಕಲ್ಲು ಬಿದ್ದು ಒಂದು ವರ್ಷದ ಸಾವು- ಬದುಕಿನ ನಡುವೆ ಪದ್ಮಿನಿ ಪತಿ ಹೋರಾಡಿ, ಸಾವನ್ನಪ್ಪಿದ್ದರು. ಪದ್ಮಿನಿಯೂ ಇಹಲೋಕ ತ್ಯಜಿಸಿದ್ದಾರೆ. ಪರಿಣಾಮ ಯುವಾನ್ ಎಂಬ ಮಗು ತಬ್ಬಲಿಯಾಗಿ ಅಜ್ಜ- ಅಜ್ಜಿಯ ಮಡಿಲಿಗೆ ಬಿದ್ದಿದೆ.
ಪದ್ಮಿನಿ ಮೂಲತಃ ಆಂಧ್ರಪ್ರದೇಶದವರು. 2010ರಲ್ಲಿ ಕೆಲಸ ನಿಮಿತ್ತ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. SBIನ ಹಲವು ಬ್ರಾಂಚ್ ಗಳಲ್ಲಿ ಕೆಲಸ ಮಾಡಿದ್ದರು. ಕೆಲಸ ಮುಗಿಸಿ ಮನೆ ದಾರಿ ಹಿಡಿದ ಪದ್ಮಿನಿಯನ್ನು ನಾಯಂಡಹಳ್ಳಿ ಜಂಕ್ಷನ್ ಬಳಿ ಕಸದ ಲಾರಿ ಬಲಿ ಪಡೆದಿದೆ.
ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರಿ ಪೊಲೀಸರು ನಿನ್ನೆಯೇ ಬಿಬಿಎಂಪಿ ಕಸದ ಲಾರಿ ಚಾಲಕ ಶಿವರಾಜ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಂದೇನೂ ತಪ್ಪಿಲ್ಲ. ಪದ್ಮಿನಿಯೇ ಗಾಡಿಗೆ ಅಡ್ಡ ಬಂದಿದ್ದು ಅಂತ ವಾದಿಸಿದ್ದಾನೆ. ಇದನ್ನು ಕಂಡ ಪ್ರತ್ಯಕ್ಷದರ್ಶಿ ಆಟೋ ಚಾಲಕರೊಬ್ಬರು ಬಿಬಿಎಂಪಿ ಲಾರಿ ಚಾಲಕನದ್ದೇ ತಪ್ಪು ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
PublicNext
20/04/2022 09:26 am